ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಗುರುವಾರ ಮುಸ್ಲಿಂ ವ್ಯಾಪಾರಿಯೊಬ್ಬರ ಮೇಲೆ ಕೆಲ ಭಜರಂಗದಳ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಈ ಸಂಬಂಧ ವಿವಿಧ ಸೆಕ್ಷನ್ ಗಳಡಿಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಎಂ ಲಕ್ಷ್ಮಿ ಪ್ರಸಾದ್ ಹೇಳಿರುವುದಾಗಿ ಎಎನ್ ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಭಜರಂಗದಳದ ಕಾರ್ಯಕರ್ತರು ವಾಗ್ವಾದ ನಡೆಸಿ ಮುಸ್ಲಿಂ ವ್ಯಾಪಾರಿ ಮೇಲೆ ಹಲ್ಲೆ ನಡೆಸಿದ್ದಾರೆ. ಭದ್ರಾವತಿಯ ಹೊಸಮನೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಬುಧವಾರ ಮಧ್ಯಾಹ್ನ 12-30 ರ ಸುಮಾರಿನಲ್ಲಿ ಹೊಸಮನೆ ಪ್ರದೇಶದಲ್ಲಿ ಹಲಾಲ್ ಮಾಂಸದ ವಿರುದ್ಧ ಅಭಿಯಾನ ನಡೆಸುತ್ತಿದ್ದ ಕೆಲ ಭಜರಂಗ ದಳ ಕಾರ್ಯಕರ್ತರು, ಮುಸ್ಲಿ ಮಾಂಸ ಮಾರಾಟದ ವ್ಯಾಪಾರಿ ತೊಸಿಫ್ ಎಂಬವರ ಮೇಲೆ ಹಲ್ಲೆ ನಡೆಸಿದ್ದಾರೆ.
ಕೋಳಿ ಅಂಗಡಿಯಲ್ಲಿ ಹಲಾಲ್ ಮಾಂಸ ಮಾರಾಟ ಮಾಡದಂತೆ ಭಜರಂಗ ದಳ ಕಾರ್ಯಕರ್ತರು ಮುಸ್ಲಿಂ ವ್ಯಾಪಾರಿಗೆ ಹೇಳಿದ್ದಾರೆ. ಅಂತಹ ಮಾಂಸ ಸಿದ್ಧವಾಗಿಲ್ಲ. ಇದನ್ನು ವ್ಯವಸ್ಥೆ ಮಾಡುವುದಾಗಿ ವ್ಯಾಪಾರಿ ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಭಜರಂಗದಳದ ಕಾರ್ಯಕರ್ತರು ವ್ಯಾಪಾರಿಯನ್ನು ಥಳಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೂರಿನ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ಆರಂಭಿಸಿದ್ದು, ಐವರು ಬಲಪಂಥೀಯ ಸದಸ್ಯರನ್ನು ವಿಚಾರಣೆ ನಡೆಸಲಾಗಿದೆ. ಹಳೆ ಭದ್ರಾವತಿಯಲ್ಲಿಯೂ ಇದೇ ರೀತಿಯಲ್ಲಿ ಹಲಾಲ್ ಮಾಂಸವನ್ನು ಸರ್ವೀಸ್ ಮಾಡದಂತೆ ಹೋಟೆಲ್ ಮಾಲೀಕರೊಬ್ಬರಿಗೆ ಭಜರಂಗ ದಳ ಕಾರ್ಯಕರ್ತರು ಬೆದರಿಕೆ ಹಾಕಿರುವ ಕುರಿತು ಪ್ರಕರಣ ದಾಖಲಾಗಿದೆ.