ಇಸ್ಲಾಂ ಎನ್ನುವುದು ಧರ್ಮವಲ್ಲ, ಅದು ಮತವಲ್ಲ, ಅದು ಸಂಸ್ಕೃತಿಯಲ್ಲ.. ಅದು ಸಭ್ಯತೆಯಲ್ಲ, ಅದು ನಾಗರೀಕತೆಯಲ್ಲ.. ಅದು ಸಂಸ್ಕಾರ ಅಲ್ಲ.. ಅದು ಮಾನವೀಯತೆ ಅಲ್ಲ, ಅದು ಕ್ರೂರಿ, ಅದು ಅಮಾನುಷತೆ, ಅದು ಅತ್ಯಾಚಾರ, ಅದು ಲೂಟಿಕೋರರ ತಂಡ, ಅದು ಕಾಮುಕರ ಗ್ಯಾಂಗ್ ಎಂದು ನಾವು ಅರ್ಥೈಸಿಕೊಳ್ಳಬಹುದು… ಹೀಗೆ ಸಾಗುತ್ತದೆ ಹಿಂದೂ ಪರ ಮುಖಂಡ ರಾಧಾಕೃಷ್ಣ ಅಡ್ಯ0ತಾಯ ಅವರ ದ್ವೇಷದ ಮಾತು..
ವಿಹೆಚ್ ಪಿ, ಭಜರಂಗದಳ, ಹಿಂದೂ ಜಾಗರಣ ವೇದಿಕೆ ವತಿಯಿಂದ ವಿಟ್ಲದಲ್ಲಿ ಜೂನ್ 6ರಂದು ಹಮ್ಮಿಕೊಂಡಿದ್ದ ಬೃಹತ್ ಹಿಂದೂ ಜಾಗೃತಿ ಸಮಾವೇಶದ ಬಗ್ಗೆ ದಿ ಕ್ವಿನ್ಟ್ ವರದಿ ಮಾಡಿದೆ. ಸುಮಾರು 500 ಮಂದಿ ಪಾಲ್ಗೊಂಡಿದ್ದ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಯಾದ ವಿಚಾರಗಳು ಲವ್ ಜಿಹಾದ್, ಬಲವಂತದ ಮತಾಂತರ ವಿರೋಧಿಸುವುದು.
ಹಿಂದೂ ಸಂಘಟನೆಗಳ ಮುಖಂಡರಾದ ಹೆಚ್ ಜೆವಿ ಮುರಳಿಕೃಷ್ಣ ಹಸಂತಡ್ಕ, ರಾಧಾಕೃಷ್ಣ ಅಡ್ಯ0ತಾಯ, VHPಯ ತನ್ಮಯಿ ಸಭೆಯನ್ನು ಉದ್ದೇಶಿಸಿ ಮಾತನಾಡುವ ವೇಳೆ ಇಸ್ಲಾಂ ಧರ್ಮದ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ರಾಧಾಕೃಷ್ಣ ಅಡ್ಯ0ತಾಯ ವಿರುದ್ಧ ವಿಟ್ಲ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೇ, ಇದುವರೆಗೂ ಪೊಲೀಸರು ಕ್ರಮ ತೆಗೆದುಕೊಂಡಿಲ್ಲ.
ಕಳೆದ ಜನವರಿಯಿಂದ ಹಿಂದೂ ಜಾಗರಣ ವೇದಿಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂತಹ 6 ಸಮಾವೇಶ ಮಾಡಿದೆ. ದಿ ಕ್ವಿನ್ಟ್ ಪ್ರಕಾರ, ಉತ್ತರಾಖಂಡ್ ನ ಹರಿದ್ವಾರದಲ್ಲಿ ನಡೆದ ಧರ್ಮದ ಸಂಸದ್ ಸಭೆಗೂ, ಜೂನ್ 6ರಂದು ವಿಟ್ಲದಲ್ಲಿ ನಡೆದ ಹಿಂದೂ ಜಾಗೃತಿ ಸಭೆಗೂ ಹಚ್ಚಿನ ವ್ಯತ್ಯಾಸಗಳಿಲ್ಲ.
ಮುರಳಿಕೃಷ್ಣ ಹಸಂತಡ್ಕ ಭಾಷಣ ಮಾಡುತ್ತಾ, ಹಿಂದೂಗಳು ಸುಮ್ಮನೆ ಇರುತ್ತಾರೆ ಎಂದು ಭಾವಿಸುತ್ತೀರಾ? ನಮ್ಮ ಸಂರಕ್ಷಣೆಗೆ ನಾವು ಪ್ಲಾನ್ ಮಾಡಿಕೊಂಡಿದ್ದೇವೆ. ಪ್ರತಿಯೊಂದು ಕ್ರಿಯೆಗೂ ಪ್ರತಿಕ್ರಿಯೆ ಎನ್ನುವುದು ಇರುತ್ತದೆ. ಇದು ಹಿಂದೂ ಧರ್ಮದ ಮೂಲ ನಿಯಮ. ಹಿಂದೂ ಧರ್ಮಕ್ಕೆ ಬೆದರಿಕೆ ಒಡ್ದುತ್ತಿರುವವರೆಲ್ಲರಿಗೂ ಇದು ಒಂದು ಎಚ್ಚರಿಕೆ ಎನ್ನುತ್ತಾರೆ.
2021ರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಂಗಳೂರಿನಲ್ಲಿ ಮಾತನಾಡುತ್ತಾ, ಕ್ರಿಯೆಗೆ ಪ್ರತಿಕ್ರಿಯೆ ಇರುತ್ತೆ ಎಂದಿದ್ದನ್ನು ನೆನಪಿಸಿಕೊಳ್ಳಬಹುದು.
VHP ನಾಯಕಿ ತನ್ಮಯಿ ಮಾತನಾಡುತ್ತಾ, ಹಿಂದೂ ಯುವತಿಯರನ್ನು ಮದುವೆ ಆಗಿ ಸಿರಿಯಾದ ISIS ಗೆ ಸೇರಿಸುವ ಹುನ್ನಾರವನ್ನು ಮುಸ್ಲಿಂ ಯುವಕರು ಹೊಂದಿದ್ದಾರೆ. ಕ್ರಿಶ್ಚಿಯನ್ನರು ವಿಶ್ವದ ಇತರೆ ದೇಶಗಳಿಗೆ ಕರೆದೋಯ್ದು ನಿರಾಶ್ರಿತರನ್ನಾಗಿಸುವ ದುರುದ್ದೇಶ ಹೊಂದಿದ್ದಾರೆ. ಹಿಂದೂಗಳಿಗೆ ಇರುವುದೊಂದೇ ದೇಶ.. ಅದು ಭಾರತ. ಆದರೇ ಅದರ ಮೇಲೆ ಮುಸ್ಲಿಮರು ದಾಳಿ ನಡೆಸುತ್ತಿದ್ದಾರೆ ಎನ್ನುತ್ತಾರೆ.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದ ಮೇಲೆ ಇಂತಹ ಸಮಾವೇಶಗಳು ಹೆಚ್ಚುತ್ತಲೇ ಇವೆ. ಇಂತಹ ದ್ವೇಷ ರಾಜಕೀಯಗಳಿಗೆ ತಡೆ ಹಾಕುವ ಯಾವುದೇ ಪ್ರಯತ್ನಗಳು ನಡೆಯುತ್ತಿಲ್ಲ ಎಂಬ ಆಕ್ರೋಶ ಸಾರ್ವಜನಿಕ ವಲಯದಿಂದ ವ್ಯಕ್ತವಾಗುತ್ತಿದೆ.