ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಿಜೆಪಿ ನಾಯಕರ ಜೊತೆಗೆ ರಹಸ್ಯ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಿನ್ನೆ ಬೆಂಗಳೂರಿನ ತಾಜ್ ಹೋಟೆಲ್ನಲ್ಲಿ ಕೇಂದ್ರ ಸಚಿವ ಕಿಶನ್ ರೆಡ್ಡಿ ಅವರನ್ನು ಕುಮಾರಸ್ವಾಮಿ ಭೇಟಿ ಆಗಿ ರಹಸ್ಯ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಹೋಟೆಲ್ನಲ್ಲಿ ಕುಮಾರಸ್ವಾಮಿ ಅವರು 2 ಗಂಟೆಯಷ್ಟು ಹೊತ್ತು ತಂಗಿದ್ದರು. ಇದೇ ವೇಳೆ ಕಿಶನ್ ರೆಡ್ಡಿ ಅದೇ ಹೋಟೆಲ್ನಲ್ಲಿದ್ದರು. ಈ ಸಂದರ್ಭದಲ್ಲಿ ರಾಜ್ಯಸಭಾ ಚುನಾವಣೆ ಬಗ್ಗೆ ಇಬ್ಬರೂ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ರಾಜ್ಯಸಭಾ ಚುನಾವಣೆ ಮತದಾನ ಆರಂಭ ಆಗಿದ್ದು, ಜೆಡಿಎಸ್ ಅಭ್ಯರ್ಥಿಗೂ ಬಹುಮತ ಇಲ್ಲ, ಕಾಂಗ್ರೆಸ್ ೨ನೇ ಅಭ್ಯರ್ಥಿಗೂ ಬಹುಮತ ಇಲ್ಲ. ಕಾಂಗ್ರೆಸ್ಗೆ ಬೆಂಬಲ ಕೊಡಲು ಜೆಡಿಎಸ್ ನಿರಾಕರಿಸಿರುವುದು ಮತ್ತು ಜೆಡಿಎಸ್ಗೆ ಬೆಂಬಲ ಕೊಡಲು ಕಾಂಗ್ರೆಸ್ ನಿರಾಕರಿಸಿರುವುದು ಬಿಜೆಪಿಯ ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ ಗೆಲುವಿಗೆ ಕಾರಣ ಆಗಲಿದೆ.
ಆದರೆ ಕೇಂದ್ರದ ಬಿಜೆಪಿ ಸಚಿವ ಕಿಶನ್ ರೆಡ್ಡಿ ಜೊತೆಗೆ ನಾನು ಮಾತುಕತೆ ನಡೆಸಿಲ್ಲ, ಭೇಟಿ ಆಗಿಲ್ಲ ಎಂದು ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿದ್ದಾರೆ. ಇತ್ತ ಮಾಜಿ ಸಿಎಂ ಯಡಿಯೂರಪ್ಪ ಕೂಡಾ ಕುಮಾರಸ್ವಾಮಿ ಮತ್ತು ಬಿಜೆಪಿ ನಾಯಕರ ನಡುವಿನ ಭೇಟಿಯನ್ನು ನಿರಾಕರಿಸಿದ್ದಾರೆ.