ಯೋಗ ಭಂಗಿಗಳನ್ನು ಪ್ರತಿನಿತ್ಯ ಬೆಳಗ್ಗೆ ಮಾಡುವುದರಿಂದ ದೇಹವು ಆರೋಗ್ಯಕರವಾಗಿರುತ್ತದೆ. ಇಡೀ ದಿನ ಮನಸ್ಸು ಚೈತನ್ಯದಿಂದ ತುಂಬಿರುವಂತೆ ಮಾಡುತ್ತದೆ. ಬೆಳಿಗ್ಗೆ ಎದ್ದಾಕ್ಷಣದಿಂದ ಮನಸ್ಸು ನಿರಾಳವಾಗಿದ್ದರೆ ಅಥವಾ ಚಟುವಟಿಕೆಯಿಂದ ಇದ್ದರೆ ಆ ದಿನಪೂರ್ತಿ ಖುಷಿಯಾಗಿರಲು ಸಾಧ್ಯ. ಹಾಗಿದ್ದಾಗ ಪ್ರತಿನಿತ್ಯ ಬೆಳಗ್ಗೆ ಮಾಡಬಹುದಾದ ಕೆಲವು ಯೋಗ ಭಂಗಿಗಳ ಕುರಿತಾಗಿ ತಿಳಿಯೋಣ.
ಯೋಗ ಭಂಗಿಗಳು ದೇಹವನ್ನು ಮಾತ್ರವಲ್ಲ ಮಾನಸಿಕ ಚಿಂತೆಯನ್ನೂ ದೂರ ಮಾಡುತ್ತವೆ. ಆರೋಗ್ಯದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತವೆ. ಬೆಳಗ್ಗೆ ಬೇಗ ಏಳುವ ಅಭ್ಯಾಸ ರೂಢಿಯಲ್ಲಿರಲಿ. ಜತೆಗೆ ದೇಹವನ್ನು ಸದೃಢವಾಗಿರಿಸುವ ಕೆಲವೊಂದಿಷ್ಟು ಯೋಗಾಸನಗಳನ್ನು ಅಭ್ಯಾಸ ಮಾಡುವ ಬಗ್ಗೆ ಗಮನವಿರಲಿ.
ಸೂರ್ಯ ನಮಸ್ಕಾರ: ಬೆಳಗ್ಗೆ ಎದ್ದಾಕ್ಷಣ ಸೂರ್ಯ ದೇವನಿಗೆ ನಮಸ್ಕಾರ ಮಾಡುವುದು ಉತ್ತಮ. 12 ಆಸನಗಳ ಸಂಯೋಜನೆಯನ್ನು ಹೊಂದಿರುವ ಸೂರ್ಯ ನಮಸ್ಕಾರ ಸ್ನಾಯುಗಳನ್ನು ಬಲಪಡಿಸುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಬೆನ್ನು, ಸೊಂಟ ನೋವಿಗೆ ಪರಿಹಾರ ನೀಡುತ್ತದೆ. ಜತೆಗೆ ಚಯಾಪಚಯ ಕ್ರಿಯೆ ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ.
ಭುಜಂಗಾಸನ ಈ ಯೋಗ ಭಂಗಿಯು ಕಿಬ್ಬೊಟ್ಟೆಯ ಸ್ನಾಯುಗಳನ್ನು ಬಲಪಡಿಸುತ್ತದೆ. ಬೆನ್ನಿನ ನೋವನ್ನು ಸುಧಾರಿಸುತ್ತದೆ ಹಾಗೂ ಹೊಟ್ಟೆಯ ಬೊಜ್ಜು ಕರಗಿಸಿಕೊಳ್ಳಲು ಈ ಆಸನ ಸಹಾಯ ಮಾಡುತ್ತದೆ. ತಲೆಭಾರ, ಕುತ್ತಿಗೆ, ಕಾಲುನೋವು, ಕೈ ನೋವುಗಳಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ.
ಮುದ್ರಾಸನ ಜೀರ್ಣಕ್ರಿಯೆ ಸರಿಯಾದ ಕ್ರಮದಲ್ಲಿ ಆಗುವಂತೆ ನೋಡಿಕೊಳ್ಳುವ ಆಸನವಿದು. ಹೊಟ್ಟೆಯ ಸ್ನಾಯುಗಳನ್ನು ಬಲಪಡಿಸುವುದರ ಜತೆಗೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಜತೆಗೆ ಮಾನಸಿಕ ಚಿಂತೆಯನ್ನು ದೂರ ಮಾಡಿಕೊಳ್ಳಲು ಈ ಯೋಗ ಭಂಗಿ ಸಹಾಯಕವಾಗಿದೆ.
ಪಾರ್ಶ್ವ ಸುಖಾಸನ ಮಾನಸಿಕ ಒತ್ತಡ ಮತ್ತು ಆತಂಕವನ್ನು ದೂರ ಮಾಡಿಕೊಳ್ಳಲು ಈ ಯೋಗ ಭಂಗಿ ಸಹಾಯಕ. ಮನಸ್ಸನ್ನು ಶಾಂತವಾಗಿರಿಸಲು ಮತ್ತು ಅನಗತ್ಯ ಚಿಂತೆಗಳಿಂದ ದೂರವಿರಲು ಈ ಯೋಗ ಭಂಗಿ ಸಹಾಯಕವಾಗಿದೆ. ಜತೆಗೆ ಸೊಂಟ ನೋವು ನಿವಾರಣೆಗೆ ಸಹಾಯಕವಾಗಿದೆ.
ಕುಂಭಾಸನ ಈ ಯೋಗ ಭಂಗಿಯಿಂದ ದೇಹ ಸಡಿಲವಾಗುತ್ತದೆ. ಬೆನ್ನು, ಹೊಟ್ಟೆಯ ಭಾಗವನ್ನು ಸುಧಾರಿಸುತ್ತದೆ. ಕೈಕಾಲುಗಳು ಸಡಿಲವಾಗುವುದರಿಂದ ಕಾಲು ಸೆಳೆತ, ಮೈ-ಕೈ ನೋವಿನಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ. ಜತೆಗೆ ಮಾನಸಿಕ ಆರೋಗ್ಯವನ್ನು ಸುಧಾರಿಸಿಕೊಳ್ಳುವ ಯೋಗ ಭಂಗಿ ಇದಾಗಿದೆ.