ಕೊತ್ತಂಬರಿ ಬೀಜ ಅಥವಾ ಕೊತ್ತಂಬರಿ ಸೊಪ್ಪು ಎಲ್ಲರ ಅಡುಗೆ ಮನೆಯಲ್ಲಿ ಕಾಣ ಸಿಗುತ್ತೆ. ಮಾರುಕಟ್ಟೆಯಲ್ಲಿ ಅಗ್ಗವಾಗಿ ಸಿಗುವ ಈ ಸೊಪ್ಪಿನ ಬಳಕೆ ಕೂಡ ಅಷ್ಟಕಷ್ಟೇ ಎನ್ನಬಹುದು. ಆದರೆ ಇದರಲ್ಲಿರುವ ಪೋಷಕಾಂಶಗಳ ಬಗ್ಗೆ ತಿಳಿದುಕೊಂಡರೆ ಮುಂದೆ ಪ್ರತಿ ಆಹಾರ ಪದಾರ್ಥಗಳಲ್ಲೂ ಕೊತ್ತಂಬರಿ ಬಳಸುತ್ತೀರಿ. ಅದರಲ್ಲೂ ಕೊತ್ತಂಬರಿ ಬೀಜದ ನೀರು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಹಾಗಿದ್ರೆ ಕೊತ್ತಂಬರಿ ನೆನಸಿದ ನೀರು ಕುಡಿಯುವುದರಿಂದ ಸಿಗುವ ಆರೋಗ್ಯಕಾರಿ ಪ್ರಯೋಜನಗಳನ್ನು ತಿಳಿಯೋಣ.
ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ:
ಕೊತ್ತಂಬರಿ ನೆನಸಿದ ನೀರನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಈ ನೀರಿನಲ್ಲಿರುವ ಅ್ಯಂಟಿ-ಆಕ್ಸಿಡೆಂಟ್ಗಳು ದೇಹದಲ್ಲಿನ ಫ್ರೀ ರಾಡಿಕಲ್ಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಕಾರಣದಿಂದಾಗಿ ಅನಾರೋಗ್ಯಕ್ಕೆ ತುತ್ತಾಗುವ ಅಪಾಯ ಕೂಡ ಕಡಿಮೆಯಾಗುತ್ತದೆ.
ಜೀರ್ಣಕ್ರಿಯೆ ಸುಧಾರಣೆ:
ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡುವಲ್ಲಿ ಕೊತ್ತಂಬರಿ ನೀರು ವಿಶೇಷ ಪಾತ್ರ ವಹಿಸುತ್ತದೆ. ಇದು ಜೀರ್ಣಕಾರಿ ಸಮಸ್ಯೆಗಳನ್ನು ದೂರ ಮಾಡುತ್ತದೆ. ಇದರಿಂದಾಗಿ ಜೀರ್ಣಾಂಗ ವ್ಯವಸ್ಥೆಯು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.
ದೇಹವನ್ನು ನಿರ್ವಿಷಗೊಳಿಸುತ್ತದೆ:
ಕೊತ್ತಂಬರಿ ನೀರು ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ಇದನ್ನು ಕುಡಿಯುವುದರಿಂದ ದೇಹದಲ್ಲಿರುವ ವಿಷಾಂಶಗಳು ಹೊರಬರುತ್ತವೆ. ಈ ಕಾರಣದಿಂದಾಗಿ ಸೋಂಕಿನ ಅಪಾಯ ಕೂಡ ಕಡಿಮೆಯಾಗುತ್ತದೆ.
ಕೂದಲನ್ನು ಬಲಪಡಿಸುತ್ತದೆ:
ಕೊತ್ತಂಬರಿ ನೀರನ್ನು ಕುಡಿಯುವುದು ಕೂದಲನ್ನು ಬಲಪಡಿಸಬಹುದು. ಕೊತ್ತಂಬರಿ ಬೀಜಗಳಲ್ಲಿ ವಿಟಮಿನ್-ಕೆ, ಸಿ ಮತ್ತು ಎ ಹೇರಳವಾಗಿ ಕಂಡುಬರುತ್ತವೆ. ಇದು ಕೂದಲನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಹೀಗಾಗಿ ಕೂದಲು ತಂಡಾಗುವ ಸಮಸ್ಯೆ ಹೊಂದಿರುವವರು ಕೊತ್ತಂಬರಿ ನೀರಿನ ಮೊರೆ ಹೋಗಬಹುದು.
ಮುಖದ ಕಲೆಗಳು ಮಾಯ:
ಕೊತ್ತಂಬರಿ ನೀರನ್ನು ಸೇವಿಸುವುದರಿಂದ ಮುಖದ ಮೇಲಿನ ಕಲೆಗಳು ನಿಧಾನವಾಗಿ ಮಾಯವಾಗುತ್ತವೆ. ಕೊತ್ತಂಬರಿ ಸೊಪ್ಪು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಚರ್ಮವನ್ನು ಸ್ವಚ್ಛಗೊಳಿಸಲು ಮತ್ತು ಹೊಳೆಯುವಂತೆ ಮಾಡಲು ಸಹಾಯ ಮಾಡುತ್ತದೆ.
ಕೊತ್ತಂಬರಿ ನೀರನ್ನು ತಯಾರಿಸುವುದು ಹೇಗೆ?
ಕೊತ್ತಂಬರಿ ನೀರನ್ನು ತಯಾರಿಸಲು, ಒಂದು ಚಮಚ ಪೂರ್ತಿ ಕೊತ್ತಂಬರಿ ಬೀಜಗಳನ್ನು ತೆಗೆದುಕೊಳ್ಳಿ. ನಂತರ ಅವುಗಳನ್ನು ಒಂದು ಲೋಟ ನೀರಿನಲ್ಲಿ ಒಂದು ರಾತ್ರಿ ನೆನೆಸಿಡಿ. ಬೆಳಿಗ್ಗೆ ಈ ನೀರನ್ನು ಸೋಸಿ ಸೇವಿಸಿ. ನೀವು ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಹೆಚ್ಚು ಪ್ರಯೋಜನಕಾರಿ. ನೀರನ್ನು ಫಿಲ್ಟರ್ ಮಾಡಿದ ನಂತರ, ಈ ಬೀಜಗಳನ್ನು ಎಸೆಯುವ ಬದಲು ಅದನ್ನು ಒಣಗಿಸಿ ಪುಡಿ ಮಾಡಿ ಬಳಸಬಹುದು.