ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಕಾರ ಮಳೆಯಿಂದ ರಾಮನಗರ, ಮಂಡ್ಯ ಜಿಲ್ಲೆಯಲ್ಲಿ ವ್ಯಾಪಕ ಮಳೆ ಆಗುತ್ತಿದೆ. ಪರಿಣಾಮ ಬೆಂಗಳೂರು- ಮೈಸೂರು ನಡುವಣ ರಾಷ್ಟ್ರೀಯ ಹೆದ್ದಾರಿ ಜಾಲಾವೃತವಾಗಿದೆ. ಮೂರ್ನಾಲ್ಕು ಅಡಿ ಎತ್ತರದಲ್ಲಿ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ಕಾರುಗಳು ಹಲವು ವಾಹನಗಳು ಮುಳುಗಡೆ ಆಗಿವೆ.
ಬೆಂಗಳೂರು – ಮೈಸೂರು ನಡುವಿನ ದಶಪಥ ಹೆದ್ದಾರಿಯ ಬಸವನಪುರದ ಸರ್ವಿಸ್ ರಸ್ತೆ ಸಂಪೂರ್ಣ ಮುಳುಗಡೆ ಆಗಿದೆ. ಪರಿಣಾಮ ಈ ಭಾಗದಲ್ಲಿ ಸಂಚಾರ ಬಂದ್ ಆಗಿದೆ. ಹೀಗಾಗಿ ರಸ್ತೆ ಮಾರ್ಗವಾಗಿ ಬೆಂಗಳೂರು ಮತ್ತು ಮೈಸೂರು ನಡುವೆ ಸಂಚರಿಸುವವರು ಒಂದು ದಿನದ ಮಟ್ಟಿಗೆ ತಮ್ಮ ಪ್ರಯಾಣ ಮುಂದೂಡುವುದು ಒಳಿತು. ಇಲ್ಲ ಎಂದಲ್ಲಿ ಮಾರ್ಗ ಮಧ್ಯೆ ಸಿಲುಕಿ ಪರದಾಡುವ ಸ್ಥಿತಿ ನಿರ್ಮಾಣ ಆಗಬಹುದು.
ರೈಲುಗಳ ಸಂಚಾರವೂ ರದ್ದು
ಭಾರಿ ಮಳೆ ಕಾರಣ ರಾಮನಗರ ರೈಲ್ವೆ ನಿಲ್ದಾಣ ಸಂಪೂರ್ಣ ಜಲಾವೃತವಾಗಿದೆ. ರೈಲ್ವೆ ಹಳಿಗಳು ಕಾಣದ ರೀತಿಯಲ್ಲಿ ನೀರು ಆವರಿಸಿದೆ. ರೈಲ್ವೆ ಪ್ಲಾಟ್ ಫಾರಂ ಕೂಡ ಮುಳುಗಡೆ ಆಗಿದೆ. ಹೀಗಾಗಿ ರೈಲುಗಳ ಸಂಚಾರಕ್ಕೂ ಅಡಚಣೆ ಉಂಟಾಗಿದೆ. ಸದ್ಯದ ಮಟ್ಟಿಗೆ ರೈಲು ಸಂಚಾರ ಕೂಡ ಸ್ಥಗಿತಗೊಂಡಿದೆ.
ಹೀಗಾಗಿ ರಸ್ತೆ ಮಾರ್ಗವಾಗಿ ಅಲ್ಲದೆ ರೈಲುಗಳಲ್ಲಿ ಬೆಂಗಳೂರು ಮತ್ತು ಮೈಸೂರು ನಡುವೆ ಸಂಚರಿಸುವವರು ಸಹ ಒಂದು ದಿನದ ಮಟ್ಟಿಗೆ ತಮ್ಮ ಪ್ರಯಾಣ ಮುಂದೂಡುವುದು ಒಳಿತು.