ಚಂಡಮಾರುತ ಇತ್ಯಾದಿ ಕಾರಣಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯ ಆರ್ಭಟ ಇನ್ನೂ ಕೆಲ ದಿನಗಳ ಕಾಲ ಮುಂದುವರಿಯಲಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ ಮುಂದಿನ 4 ದಿನಗಳ ಕಾಲ ಕರ್ನಾಟಕ ಸೇರಿ ದಕ್ಷಿಣದ ಬಹುತೇಕ ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದೆ.
ರಾಷ್ಟ್ರದ ಪಶ್ಚಿಮ ಮತ್ತು ಪೂರ್ವ ಭಾಗದ ಪ್ರದೇಶಗಳಲ್ಲೂ ಮಳೆಯಾಗುವ ಸಾಧ್ಯತೆ ಇದೆ. ಉಷ್ಣ ಅಲೆಯಿಂದ ತತ್ತರಿಸಿರುವ ಉತ್ತರ ಭಾರತದ ಅನೇಕ ಪ್ರದೇಶಗಳಿಗೆ ಮಳೆ ತಂಪು ತಂದಿದೆ. ಕರ್ನಾಟಕ ಹಾಗೂ ಇತರ ದಕ್ಷಿಣ ರಾಜ್ಯಗಳಲ್ಲಿ ಸತತ ಮಳೆಯಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ.
ಶನಿವಾರ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಕೆಲ ದಿನಗಳಿಂದಲೂ ಬೆಂಗಳೂರು, ಹಾಸನ, ಕೊಪ್ಪಳ, ಧಾರವಾಡ, ಚಾಮರಾಜನಗರ, ಮೈಸೂರು, ಮಂಡ್ಯ, ಹಾವೇರಿ, ಶಿವಮೊಗ್ಗ, ಕಲಬುರಗಿ ಮೊದಲಾದ ಜಿಲ್ಲೆಗಳಲ್ಲಿ ಸತತವಾಗಿ ಮಳೆಯಾಗುತ್ತಿದೆ. ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದೆ.
ಬೆಂಗಳೂರು ಸಮೀಪದ ಆಂಧ್ರದ ರಾಯಲಸೀಮೆ ಸುತ್ತಮುತ್ತ ಚಂಡಮಾರುತ ಎದ್ದಿದ್ದು, ಅದರ ಪರಿಣಾಮವಾಗಿ ಮುಂದಿನ 4 ದಿನ ಕರ್ನಾಟಕ, ಆಂಧ್ರ, ತೆಲಂಗಾಣ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ಅನೇಕ ಪ್ರದೇಶಗಳಲ್ಲಿ ಮಳೆ ಸುರಿಯುವ ನಿರೀಕ್ಷೆ ಇದೆ. ಕರ್ನಾಟಕದಲ್ಲಿ ಕಳೆದ ಕೆಲ ದಿನಗಳಿಂದ ಇದ್ದಷ್ಟು ತೀವ್ರತೆಯಲ್ಲಿ ಮಳೆ ಸುರಿಯುವ ಸಾಧ್ಯತೆ ಇಲ್ಲ. ಆದರೆ, ಕೆಲ ಪ್ರದೇಶಗಳಲ್ಲಿ ತುಸು ಹೆಚ್ಚು ಮಳೆಯಾಗಬಹುದು.