ನವದೆಹಲಿ: ದೆಹಲಿಗೆ ಬಂದ ಬಳಿಕ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ನಾಪತ್ತೆಯಾಗಿದ್ದಾರೆ. ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಲು ಜನವರಿ 31ರವರೆಗೆ ಜಾರಿ ನಿರ್ದೇಶನಾಲಯ ಸಮಯಾವಕಾಶವನ್ನು ನೀಡಿದೆ. ಸೋಮವಾರ ಇಡಿ ತಂಡವು ಹೇಮಂತ್ ಅವರ ದೆಹಲಿ ನಿವಾಸದಲ್ಲಿಯೇ ಇತ್ತು, ಆದರೂ ಎಲ್ಲಿಯೂ ಅವರು ಪತ್ತೆಯಾಗಿಲ್ಲ, ಬಳಿಕ ಅವರ ಬಿಎಂಡಬ್ಲ್ಯೂ ಕಾರನ್ನು ಇಡಿ ವಶಕ್ಕೆ ಪಡೆದಿದೆ.
ಈ ವೇಳೆ ಹೇಮಂತ್ ಸೊರೆನ್ ಎಲ್ಲಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಇಡಿ ತಂಡ ಹೇಳಿದೆ. ಸೋಮವಾರ ದೆಹಲಿಯಲ್ಲಿರುವ ಸಿಎಂ ಹೇಮಂತ್ ಸೊರೆನ್ ಮನೆ ಮೇಲೂ ಇಡಿ ದಾಳಿ ನಡೆಸಿತ್ತು. ಈ ವೇಳೆ ತನಿಖಾ ತಂಡ ಕೆಲವು ದಾಖಲೆಗಳನ್ನು ಹಾಗೂ ಅವರ ಬಿಎಂಡಬ್ಲ್ಯು ಕಾರನ್ನು ಜಪ್ತಿ ಮಾಡಿದೆ. ಇಡಿ ಉನ್ನತ ಮೂಲಗಳ ಪ್ರಕಾರ, ತನಿಖಾ ಸಂಸ್ಥೆಗೆ ಮುಖ್ಯಮಂತ್ರಿ ಕಚೇರಿಯಿಂದ ಮೇಲ್ ಬಂದಿದೆ. ಜನವರಿ 31ರಂದು ಸಿಎಂ ತನಿಖೆಗೆ ಸಹಕರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಅವರನ್ನು ಪತ್ತೆ ಹಚ್ಚಲು ಜಾರಿ ನಿರ್ದೇಶನಾಲಯದ ಕೆಲವು ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಬೀಡುಬಿಟ್ಟಿವೆ. ಶನಿವಾರ ತಡರಾತ್ರಿ ಸೊರೆನ್ ದಿಢೀರ್ ದೆಹಲಿಗೆ ಹೊರಟಿದ್ದರು, ಚಾರ್ಟರ್ಡ್ ವಿಮಾನದಲ್ಲಿ ಮುಂಜಾನೆ ದೆಹಲಿಗೆ ಬಂದಿಳಿದಿದ್ದರು.
ಅಂದಿನಿಂದ ಇಲ್ಲಿಯವರೆಗೆ ಅವರು ಎಲ್ಲಿದ್ದಾರೆ ಎಂದು ಯಾರಿಗೂ ತಿಳಿದಿಲ್ಲ. ಭೂ ಹಗರಣ ಪ್ರಕರಣದಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರಿಗೆ ಇಡಿ 10ನೇ ಸಮನ್ಸ್ ಕಳುಹಿಸಿದೆ. ಇದಕ್ಕೂ ಮುನ್ನ ಜನವರಿ 20ರಂದು ಜಾರ್ಖಂಡ್ನಲ್ಲಿ ಇಡಿ ಸೋರೆನ್ರನ್ನು ವಿಚಾರಣೆ ನಡೆಸಿತ್ತು. ಈ ವೇಳೆ ಸೊರೆನ್ಗೆ 50 ಪ್ರಶ್ನೆಗಳನ್ನು ಕೇಳಲಾಯಿತು.