# ಲೀಟರ್ ಪೆಟ್ರೋಲ್ ಬೆಲೆ 283 ರೂಪಾಯಿ
# ಲೀಟರ್ ಡೀಸೆಲ್ ಬೆಲೆ 220 ರೂಪಾಯಿ
# ಗ್ಯಾಸ್ ಸಿಲಿಂಡರ್ ಬೆಲೆ 1359 ರೂಪಾಯಿ
# ಒಂದು ಕೆಜಿ ಅಕ್ಕಿ ಬೆಲೆ 210 ರೂಪಾಯಿ
# ಒಂದು ಕೆಜಿ ಗೋಧಿಹಿಟ್ಟಿನ ಬೆಲೆ 220 ರೂಪಾಯಿ
# ಒಂದು ಕೆಜಿ ತೊಗರಿ ಬೇಳೆ ಬೆಲೆ 350 ರೂಪಾಯಿ
# ಒಂದು ಕೋಳಿ ಮೊಟ್ಟೆ ಬೆಲೆ 35 ರೂಪಾಯಿ
# ಒಂದು ಕಿಲೊ ಚಿಕನ್ ಬೆಲೆ 1000 ರೂಪಾಯಿ
# ಒಂದು ಕೆಜಿ ಈರುಳ್ಳಿ ಬೆಲೆ 600 ರೂಪಾಯಿ
# ಒಂದು ಕೆಜಿ ಮೆಣಸಿನಕಾಯಿ ಬೆಲೆ 710 ರೂಪಾಯಿ
# ಒಂದು ಹಾಲಿನ ಪುಡಿ ಬೆಲೆ 1345 ರೂಪಾಯಿ
# ನೂರು ಗ್ರಾಂ ಟೀ ಪೌಡರ್ ಬೆಲೆ 100 ರೂಪಾಯಿ
# ಒಂದು ಕೆಜಿ ಕೊಬ್ಬರಿ ಎಣ್ಣೆ ಬೆಲೆ 900 ರೂಪಾಯಿ
ಇದು ನಮ್ಮ ನೆರೆಯ ಶ್ರೀಲಂಕಾದಲ್ಲಿರುವ ಸದ್ಯದ ಬೆಲೆಗಳು.. ಕಾರಣ ತೀವ್ರ ಸ್ವರೂಪದ ಹಣದುಬ್ಬರ. ಪರಿಣಾಮ ಟೀ ಪುಡಿಯಿಂದ ಹಿಡಿದು ಪೆಟ್ರೋಲ್ವರೆಗೂ ದರಗಳು ಸಿಕ್ಕಾಪಟ್ಟೆ ಹೆಚ್ಚಾಗಿವೆ. ಅಮೆರಿಕಾದ ಡಾಲರ್ ಎದುರು ಲಂಕಾದ ರೂಪಾಯಿ ಅಪಮೌಲ್ಯಗೊಂಡಿದೆ. ಅಮೆರಿಕಾದ ಒಂದು ಡಾಲರ್ಗೆ 275 ಲಂಕಾ ರೂಪಾಯಿಗಳು ಸಮ.
ಕಚ್ಚಾ ತೈಲ ಆಮದು ಮಾಡಿಕೊಳ್ಳುವುದನ್ನು ಎರಡು ವಾರದ ಹಿಂದೆಯೇ ನಿಲ್ಲಿಸಿದ್ದ ಲಂಕಾ ಸರ್ಕಾರ, ಇದೀಗ ತೈಲ ಶುದ್ದೀಕರಣ ಕೇಂದ್ರವನ್ನು ಬಂದ್ ಮಾಡಿದೆ. ಪರಿಣಾಮ ಬಂಕ್ ಮುಂದೆ ಜನ ಸಾಲು ನಿಲ್ಲುತ್ತಿದ್ದಾರೆ.
ಪೆಟ್ರೋಲ್, ಡೀಸೆಲ್ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಇಬ್ಬರು ವೃದ್ಧರು ಅಸ್ವಸ್ಥಗೊಂಡು ಅಸುನೀಗಿದ್ದಾರೆ.
ನಿತ್ಯದ ಅಗತ್ಯದ ವಸ್ತುಗಳಿಗಾಗಿ ಲಂಕಾದ ಬಡ ಜನತೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಹಸಿವಿನಿಂದ ಕಂಗೆಟ್ಟಿದ್ದಾರೆ.
ಲಂಕಾದಲ್ಲಿ ವಿದ್ಯುತ್ ಕೊರತೆಯೂ ತೀವ್ರವಾಗಿದೆ. ದಿನಕ್ಕೆ ಐದಾರು ಗಂಟೆ ವಿದ್ಯುತ್ ಇದ್ದರೇ ಹೆಚ್ಚು. ಸೀಮೆ ಎಣ್ಣೆ ಕೊರತೆಯೂ ಶ್ರೀಲಂಕಾದಲ್ಲಿ ತೀವ್ರವಾಗಿದೆ.
ಹಿಂದಿನ ಬಾಕಿ ತೀರಿಸಿಲ್ಲ ಎಂಬ ಕಾರಣಕ್ಕೆ ಗ್ಯಾಸ್ ಕಂಪನಿಗಳು ಅನಿಲ ಪೂರೈಕೆ ಬಂದ್ ಮಾಡಿವೆ. ಅನಿಲ ನೌಕೆ ಸಮುದ್ರ ತೀರದಲ್ಲೇ ನಿಂತಿದೆ.
ಗ್ಯಾಸ್ ಕೊರತೆಯಿಂದ ಬಹುತೇಕ ಹೋಟೆಲ್ಗಳು ಮುಚ್ಚಿವೆ. ಶೇಕಡಾ 90ರಷ್ಟು ರೆಸ್ಟೋರೆಂಟ್ಗಳು ಮುಚ್ಚಿವೆ. ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ಉಳಿದ ರೆಸ್ಟೋರೆಂಟ್ಗಳು ಬಂದ್ ಆಗಲಿವೆ
ಪೇಪರ್ ಮತ್ತು ಪ್ರಿಂಟಿಂಗ್ಗಾಗಿ ಇಂಕ್ ಖರೀದಿಸಲಾಗದೇ ಅಲ್ಲಿನ ಶಾಲೆ ಕಾಲೇಜುಗಳಲ್ಲಿ ಪರೀಕ್ಷೆಗಳನ್ನು ಸಹ ಮುಂದೂಡಲಾಗಿದೆ.
ಶ್ರೀಲಂಕಾದ ಇಂದಿನ ಸ್ಥಿತಿಗೆ ಕೋವಿಡ್ ಕಾರಣ. 2020ರ ಮಾರ್ಚ್ ತಿಂಗಳಲ್ಲಿ ಶ್ರೀಲಂಕಾದಲ್ಲಿ ಕೋವಿಡ್ ಲಾಕ್ ಡೌನ್ ವಿಧಿಸಲಾಗಿತ್ತು. ಇದರಿಂದಾಗಿ ಲಂಕಾದ ಪ್ರಮುಖ ಉದ್ದಿಮೆಗಳಾದ ಟೀ, ಜವಳಿ, ಪ್ರವಾಸೋದ್ಯಮ ವಲಯಗಳಿಗೆ ಭಾರಿ ಹಾನಿ ಆಗಿತ್ತು.
ಸ್ಥಿರವಾದ ಆದಾಯ ಇಲ್ಲದೇ ಲಂಕಾದ ಆರ್ಥಿಕ ಸ್ಥಿತಿ ಕ್ಷೀಣಿಸಿತ್ತು. ಸೆಂಟ್ರಲ್ ಬ್ಯಾಂಕ್ ಬಳಿಯ ವಿದೇಶಿ ದ್ರವ್ಯದ ಮೌಲ್ಯವೂ ಕುಸಿದಿತ್ತು. ಇದು ಹಿಂದೆಂದೂ ಇಲ್ಲದ ರೀತಿಯ ಹಣದುಬ್ಬರಕ್ಕೆ ಕಾರಣವಾಯಿತು.
1970ರಲ್ಲಿ ಸಿರಿಮಾವೋ ಬಂಡಾರ ನಾಯಿಕೆ ಪ್ರಧಾನಿ ಆಗಿದ್ದಾಗ ಶ್ರೀಲಂಕಾವನ್ನು ಬರ ಬಾಧಿಸಿತ್ತು. ಈಗಿನ ಆರ್ಥಿಕ ಬಿಕ್ಕಟ್ಟು ಅದಕ್ಕಿಂತ ದಾರುಣ ಎಂದು ಪರಿಣಿತರು ಅಭಿಪ್ರಾಯಪಡುತ್ತಾರೆ.
ಆಹಾರ ಉತ್ಪನ್ನ, ಔಷಧಿಗಳು, ಇತರೆ ನಿತ್ಯದ ಅಗತ್ಯ ವಸ್ತುಗಳ ಖರೀದಿಗಾಗಿ ಭಾರತ ಸರ್ಕಾರ ನೂರು ಕೋಟಿ ಡಾಲರ್ ಸಾಲ ನೀಡಲು ಭಾರತ ಸರ್ಕಾರ ಮುಂದಾಗಿದೆ.