ಮಹಾಕುಂಭದಲ್ಲಿ ಭಕ್ತರು ಪವಿತ್ರ ಸ್ನಾನ ಮಾಡುತ್ತಿರುವ ನೀರು ಸ್ನಾನ ಮಾಡುವುದಕ್ಕೂ ಯೋಗ್ಯವಲ್ಲ ಎಂದು ಕೇಂದ್ರ ಸರ್ಕಾರದ ಆಧೀನದಲ್ಲಿ ಬರುವ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಸಲ್ಲಿಸಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಪ್ರಧಾನ ಪೀಠಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ವರದಿಯನ್ನು ಸಲ್ಲಿಸಿದೆ.
ಉತ್ತರಪ್ರದೇಶ ರಾಜ್ಯದ ಪ್ರಯಾಗ್ರಾಜ್ನಲ್ಲಿ ಮಹಾಕುಂಭ ನಡೆಯುತ್ತಿರುವ ನದಿ ನೀರಿನಲ್ಲಿ ಮಾನವ ಮತ್ತು ಪ್ರಾಣಿಗಳ ದೇಹ ತ್ಯಾಜ್ಯದಿಂದ ನದಿಯ ನೀರು ಹಾಳಾಗಿದೆ. ಸ್ನಾನಕ್ಕೆ ಯೋಗ್ಯವಾದ ನೀರಿನ ಪ್ರಾಥಮಿಕ ಪರಿಮಾಣವನ್ನು ಹೋಲಿಸಿದರೆ ಕುಂಭ ಮೇಳ ನಡೆಯುತ್ತಿರುವ ನದಿಯ ನೀರು ಆ ಪರಿಮಾಣವನ್ನು ಹೊಂದಿಲ್ಲ. ಕುಂಭಮೇಳದ ಪುಣ್ಯಸ್ನಾನ ನಡೆಯುತ್ತಿರುವ ವಿವಿಧ ಕಡೆಗಳಿಂದ ನೀರಿನ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ತನ್ನ ವರದಿಯಲ್ಲಿ ಹೇಳಿದೆ.
ಮಹಾಕುಂಭ ಮೇಳ ಹಿನ್ನೆಲೆಯಲ್ಲಿ ಪ್ರಯಾಗ್ರಾಜ್ನಲ್ಲಿ ಅಪಾರ ಭಕ್ತರು ಪುಣ್ಯಸ್ನಾನ ಮಾಡುತ್ತಿರುವುದರಿಂದ ನೀರು ಇನ್ನಷ್ಟು ಮಲಿನಗೊಂಡಿದೆ ಎಂದು ಮಂಡಳಿ ವರದಿ ಸಲ್ಲಿಸಿದೆ.
ಪ್ರಯಾಗ್ರಾಜ್ನಲ್ಲಿ ಗಂಗಾ ಮತ್ತು ಯಮುನಾ ನದಿಯ ಗುಣಮಟ್ಟ ಹಾಳಾಗಿದೆ ಎಂದು ಆರೋಪಿಸಿ ವಾರಾಣಸಿ ಮೂಲದ ವಕೀಲ ಸೌರಭ್ ತಿವಾರಿಯವರು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ದಾವೆಯನ್ನು ಸಲ್ಲಿಸಿದ್ದರು. ಗಂಗಾ ಮತ್ತು ಯಮುನಾ ನದಿಗೆ ಕಲುಷಿತ ನೀರನ್ನು ಹರಿಬಿಡಲಾಗುತ್ತಿದೆ ಎಂಬ ಆರೋಪಗಳ ಬಗ್ಗೆಯೂ ಹಸಿರು ನ್ಯಾಯಮಂಡಳಿ ವಿಚಾರಣೆ ನಡೆಸುತ್ತಿದೆ.
ADVERTISEMENT
ADVERTISEMENT