ಹಿಜಾಬ್ ನಿಷೇಧ ಆದೇಶವನ್ನು ಹಿಂಪಡೆಯುತ್ತೇವೆ. ಆ ಆದೇಶ ಹಿಂಪಡೆಯಲು ನಾನು ಸೂಚಿಸಿದ್ದೇನೆ. ಹಿಜಾಬ್ ಧರಿಸಬಹುದು ಎಂದು ಮೈಸೂರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಟ್ಟ ಹೇಳಿಕೆ ಈ ರಾಜ್ಯ ರಾಜಕಾರಣದಲ್ಲಿ ಮತ್ತೆ ಚರ್ಚೆಗೆ ಕಾರಣವಾಗಿದೆ.
ಹಿಜಾಬ್ ನಿಷೇಧ ವಾಪಸ್ ಪಡೆಯಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇದೆಯೇ..?
ಕರ್ನಾಟಕದಲ್ಲಿ ಹಿಜಾಬ್ ವಿವಾದ ಆರಂಭವಾಗಿದ್ದು 2021ರಲ್ಲಿ. 2021ರ ಸೆಪ್ಟೆಂಬರ್ನಲ್ಲಿ ಉಡುಪಿಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮುಸಲ್ಮಾನ ಧರ್ಮಕ್ಕೆ ಸೇರಿದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಬರದಂತೆ ಸೂಚಿಸಲಾಯಿತು. ಅದೇ ವರ್ಷದ ಡಿಸೆಂಬರ್ನಲ್ಲಿ ಕಾಲೇಜು ಆವರಣದೊಳಗೆ ಹಿಜಾಬ್ ಧರಿಸಿಕೊಂಡು ಬರುವ ವಿದ್ಯರ್ಥಿನಿಯರಿಗೆ ಪ್ರವೇಶ ನಿರ್ಬಂಧಿಸಲಾಯಿತು. ಜನವರಿ 1, 2022ರಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಮುಖ್ಯಸ್ಥರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಿಜಾಬ್ ಕಾಲೇಜು ಆವರಣದೊಳಗೆ ಹಿಜಾಬ್ ಧರಿಸುವುದನ್ನು ನಿಷೇಧಿಸಿ ನಿರ್ಣಯ ಅಂಗೀಕರಿಸಲಾಯಿತು. ಈ ವೇಳೆ ಶಾಲಾ ಅಭಿವೃದ್ಧಿ ಸಮಿತಿಯ ಮುಖ್ಯಸ್ಥರಾಗಿದ್ದು ಉಡುಪಿ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದ ರಘುಪತಿ ಭಟ್.
ಉಡುಪಿಯಲ್ಲಿರುವ ಪದವಿ ಪೂರ್ವ ಕಾಲೇಜಿಗೆ ಸೀಮಿತವಾಗಿದ್ದ ಹಿಜಾಬ್ ನಿಷೇಧ ನಿರ್ಧಾರ ರಾಜ್ಯಾದ್ಯಂತ ರಾಜಕೀಯ ತಿರುವು ಪಡೆದು ಪರ-ವಿರೋಧದ ಹೋರಾಟ ನಡೆದ ಬಳಿಕ ಕಳೆದ ವರ್ಷ ಫೆಬ್ರವರಿ 5ರಂದು ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧಿಸಿ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯ ಆಧೀನ ಕಾರ್ಯದರ್ಶಿ ಆದೇಶ ಹೊರಡಿಸಿದರು.
ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ನಲ್ಲಿ ದಾವೆ ಸಲ್ಲಿಸಲಾಯಿತು. ಏಕಸದಸ್ಯ ಪೀಠ ತನಗೆ ಹಂಚಿಕೆಯಾಗಿದ್ದ ವಿಷಯವನ್ನು ಸಾರ್ವಜನಿಕ ಮಹತ್ವದ ವಿಷಯ ಎಂದು ಪರಿಗಣಿಸಿ ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸಿತು. ಕರ್ನಾಟಕ ಹೈಕೋರ್ಟ್ನ ಮೂವರು ನ್ಯಾಯಮೂರ್ತಿಗಳ ಪೂರ್ಣಪೀಠ ಹಿಜಾಬ್ ನಿಷೇಧದ ಆದೇಶವನ್ನು ಸರಿ ಎಂದು ತೀರ್ಪು ನೀಡಿತ್ತು.
ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ದಾವೆ ಸಲ್ಲಿಸಲಾಯಿತು. ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ನ್ಯಾಯಮೂರ್ತಿ ಸುಧಾನ್ಶು ಧುಲಿಯಾ ಅವರಿದ್ದ ಪೀಠ ಭಿನ್ನ ತೀರ್ಪು ನೀಡಿ ಪ್ರಕರಣವನ್ನು ಮೂವರು ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸಿತು.
ಹಿಜಾಬ್ ನಿಷೇಧ ಪರ ಭಿನ್ನ ತೀರ್ಪು ನೀಡಿದ್ದ ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರನ್ನು ನಿವೃತ್ತರಾದ ಎರಡೇ ತಿಂಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ನವದೆಹಲಿ ಅಂತಾರಾಷ್ಟ್ರೀಯ ವ್ಯಾಜ್ಯ ಇತ್ಯರ್ಥ್ಯ ಕೇಂದ್ರದ ಮುಖ್ಯಸ್ಥರನ್ನಾಗಿ ನೇಮಕ ಮಾಡಿತು.
ಒಂದು ವರ್ಷ ಕಳೆದರೂ ರಚನೆಯಾಗದ ತ್ರಿಸದಸ್ಯ ಪೀಠ:
ಸುಪ್ರೀಂಕೋರ್ಟ್ ಭಿನ್ನ ತೀರ್ಪು ನೀಡಿದ್ದು ಅಕ್ಟೋಬರ್ 13, 2022. ಅಂದರೆ ಈ ತೀರ್ಪು ಪ್ರಕಟವಾಗಿ 1 ವರ್ಷ ನಾಲ್ಕು ತಿಂಗಳಾಗುತ್ತಾ ಬಂದರೂ ಇನ್ನೂ ಮೂವರು ನ್ಯಾಯಮೂರ್ತಿಗಳ ಪೀಠ ರಚನೆಯಾಗಿಲ್ಲ. ಇದೇ ವರ್ಷದ ಮಾರ್ಚ್ನಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಎದುರು ಮೇಲ್ಮನವಿ ವಿಷಯ ಪ್ರಸ್ತಾಪವಾದಾಗ ಹೋಳಿ ರಜೆ ಕಳೆದ ಬಳಿಕ ತ್ರಿಸದಸ್ಯ ಪೀಠ ರಚನೆ ಮಾಡುವ ಬಗ್ಗೆ ಹೇಳಿದ್ದರು.
ರಾಜ್ಯ ಸರ್ಕಾರಕ್ಕೆ ಅಧಿಕಾರ ಇದೆಯೇ..?
ಫೆಬ್ರವರಿ 5, 2022ರಲ್ಲಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದು ಕರ್ನಾಟಕ ಶಿಕ್ಷಣ ಕಾಯ್ದೆ 1983ರ 7(2)(v)ರ ಅಡಿಯಲ್ಲಿ.
ಕಾಯ್ದೆಯ 7ನೇ ಕಲಂ ಪ್ರಕಾರ:
7. ಪಾಠಕ್ರಮ, ಇತ್ಯಾದಿಗಳನ್ನು ಸರ್ಕಾರ ಗೊತ್ತುಪಡಿಸುವುದು.- (1) ರಾಜ್ಯ ಸರ್ಕಾರವು,ನಿಯಮಿಸಬಹುದಾದಂಥ ನಿಯಮಗಳಿಗೊಳಪಟ್ಟು, ಶಿಕ್ಷಣ ಸಂಸ್ಥೆಗಳ ಸಂಬಂಧದಲ್ಲಿ ಆದೇಶದ ಮೂಲಕ ಕೆಳಕಂಡವುಗಳನ್ನು ನಿರ್ದಿಷ್ಟಪಡಿಸಬಹುದು:
(2) (1)ನೇ ಉಪಪ್ರಕರಣದ ಮೇರೆಗೆ ಗೊತ್ತುಪಡಿಸಲಾದ ಪಾಠಕ್ರಮಗಳಲ್ಲಿ ಈ ಕೆಳಕಂಡ ವಿಷಯಗಳಿಗೆ ಸಂಬಂಧಪಟ್ಟ ಯೋಜನೆಗಳೂ ಸಹ ಒಳಗೊಳ್ಳಬಹುದು;
(v) ಧಾರ್ಮಿಕ, ಭಾಷಾ ಮತ್ತು ಪ್ರಾದೇಶಿಕ ಅಥವಾ ಜಾತಿ ಪಂಗಡಗಳ ಭಿನ್ನತೆಗಳಿಂದ ಅತೀತವಾಗಿ,ಭಾರತದ ಎಲ್ಲಾ ಜನತೆಯಲ್ಲಿ ಸಾಮರಸ್ಯವನ್ನು ಮತ್ತು ಸಮಾಜ ಭ್ರಾತೃತ್ವದ ಭಾವನೆಯನ್ನು ಬೆಳೆಸುವುದು ಮತ್ತು ಸ್ತ್ರೀಯರ ಗೌರವಕ್ಕೆ ಕುಂದುಂಟು ಮಾಡುವ ಆಚರಣೆಗಳನ್ನು ಬಿಟ್ಟುಬಿಡುವುದು;
ಆದರೆ ಉಪ ಪ್ರಕರಣದ 2ರ ಉಪ ಪ್ರಕರಣ (vi) ಪ್ರಕಾರ: ನಮ್ಮ ಸಮ್ಮಿಶ್ರ ಸಂಸ್ಕೃತಿಯ ಭವ್ಯ ಪರಂಪರೆಯನ್ನು ಗೌರವಿಸುವುದು ಹಾಗೂ ಕಾಪಾಡುವುದು
ಎಂದು ಕಾಯ್ದೆಯಲ್ಲಿ ಹೇಳಲಾಗಿದೆ.
ಕಲಂ 7ರ ಪ್ರಕಾರ ರಾಜ್ಯ ಸರ್ಕಾರಕ್ಕೆ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಆದೇಶಗಳನ್ನು ತನಗೆ ಸೂಕ್ತವೆನಿಸಿರುವ ಹೊರಡಿಸುವ ಅಧಿಕಾರವಿದೆ. ‘
ಸರ್ಕಾರಕ್ಕೆ ಅಧಿಕಾರವಿದೆ: – ಭಿನ್ನ ತೀರ್ಪಿನಲ್ಲೂ ಸಹಮತ:
ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧದ ಆದೇಶ ಸಂಬಂಧ ಭಿನ್ನ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ನ ಇಬ್ಬರೂ ನ್ಯಾಯಮೂರ್ತಿಗಳು ಕೂಡಾ ಸರ್ಕಾರಿ ಆದೇಶದ ಮೂಲದ ನೀತಿಯನ್ನು ರೂಪಿಸಲು ಅಧಿಕಾರವಿದೆ ಎಂದು ಸಹಮತ ವ್ಯಕ್ತಪಡಿಸಿದ್ದರು.
ಹಿಜಾಬ್ ನಿಷೇಧ ಯಾವುದೇ ಕಾಯ್ದೆ ರೂಪದ ಆದೇಶವಲ್ಲ, ಬದಲಿಗೆ ಸರ್ಕಾರಿ ಆದೇಶವಷ್ಟೇ. ಪಕ್ಷಗಳ ಸರ್ಕಾರಗಳು ಬದಲಾದಂತೆ ಸರ್ಕಾರದ ನೀತಿಗಳಲ್ಲೂ ಮಾರ್ಪಾಡಾಗುತ್ತವೆ.
1983ರ ಶಿಕ್ಷಣ ಕಾಯ್ದೆ ಮತ್ತು ಭಿನ್ನ ತೀರ್ಪು ನೀಡಿದ್ದ ಇಬ್ಬರೂ ನ್ಯಾಯಮೂರ್ತಿಗಳ ಸರ್ಕಾರಿ ಆದೇಶದ ಮೂಲಕ ಸರ್ಕಾರಕ್ಕೆ ನೀತಿಗಳನ್ನು ಜಾರಿಗೊಳಿಸಲು ಅಧಿಕಾರವಿದೆ ಎಂದು ಸಹಮತಿಸಿರುವ ಹಿನ್ನೆಲೆಯಲ್ಲಿ ಯಾವ ಕಾಯ್ದೆಯನ್ನು ಬಳಸಿ ಬಿಜೆಪಿ ಸರ್ಕಾರ ಹಿಜಾಬ್ ನಿಷೇಧ ಮಾಡಿತ್ತೋ ಅದೇ ಕಾಯ್ದೆಯನ್ನು ಬಳಸಿ ಹಿಜಾಬ್ ನಿಷೇಧ ವಾಪಸ್ ಪಡೆಯುವ ಅಧಿಕಾರ ಈಗಿನ ಸರ್ಕಾರಕ್ಕಿದೆ.