ಹಿಂದಿ ಮಾತೃಭಾಷೆಯಾಗಿದ್ದರೂ ಹಿಂದಿ ಭಾಷೆಯ ಜೊತೆಗೆ ಕನ್ನಡ ಭಾಷೆಯಲ್ಲೂ ಉಡುಪಿ ಜಿಲ್ಲೆಯ ಮಣಿಪುರದ ಸರ್ಕಾರಿ ಸಂಯುಕ್ತ ಪ್ರೌಢ ಶಾಲೆಯ ವಿದ್ಯಾರ್ಥಿನಿ ಶ್ರೀ ಕುಮಾರಿ ಪೂರ್ಣಾಂಕ ಪಡೆದಿದ್ದಾರೆ.
ಇತ್ತೀಷೆಗಷ್ಟೇ ಪ್ರಕಟಗೊಂಡ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿನಿ ಶ್ರೀ ಕುಮಾರಿಯವರು ಹಿಂದಿ ಮಾತೃಭಾಷೆಯಾಗಿದ್ದರೂ, ಕನ್ನಡದಲ್ಲಿ 125 ಕ್ಕೆ 125 ಅಂಕ ಪಡೆಯುವ ಮೂಲಕ ಒಂದು ಉತ್ತಮ ಸಾಧನೆ ಮಾಡಿದ್ದಾರೆ. 625 ಕ್ಕೆ 619 ಅಂಕ ಪಡೆದಿರುವ ವಿದ್ಯಾರ್ಥಿನಿ ಶ್ರೀ ಕುಮಾರಿ 99.04 ಪ್ರತಿಶತದೊಂದಿಗೆ ತೇರ್ಗಡೆಯಾಗಿದ್ದಾಳೆ.
ಉತ್ತರ ಪ್ರದೇಶ ಪ್ರದೇಶದ ಆಗ್ರಾದ ಬಳಿಯ ಕುಗ್ರಾಮದ ಈ ವಿದ್ಯಾರ್ಥಿನಿಯ ಕುಟುಂಬ ಹತ್ತಾರು ವರ್ಷಗಳ ಹಿಂದೆ ಉಡುಪಿಯ ಮಣಿಪುರಕ್ಕೆ ಬಂದು ನೆಲೆಸಿದೆ. ತಂದೆ ತಾಯಿ ಇಬ್ಬರೂ ಅನಕ್ಷರಸ್ತರಾಗಿದ್ದು ಕೂಲಿ ಕೆಲಸ ಮಾಡಿ, ಬಾಡಿಗೆ ಮನೆಯಲ್ಲಿದ್ದುಕೊಂಡು ಮಕ್ಕಳನ್ನು ಓದಿಸುತ್ತಿದ್ದಾರೆ.
ತಂದೆ-ತಾಯಿ ಕಷ್ಟದ ಪ್ರತಿರೂಪದವಾಗಿ ಇಂದು ಮಗಳು ಉತ್ತಮ ಸಾಧನೆ ಮಾಡಿದ್ದಾಳೆ. ಮನೆಯಲ್ಲಿ ಹೊರಲಾರದಷ್ಟು ಬಡತನವಿದ್ದರೂ ಈ ಸಲದ SSLCಯಲ್ಲಿ 619 ಅಂಕಗಳನ್ನು ಪಡೆದು 99.04% ದೊಂದಿಗೆ ‘A+’ ಶ್ರೇಣಿಯೊಂದಿಗೆ ಪಾಸಾಗಿ ಮಣಿಪುರದ ಸರ್ಕಾರಿ ಸಂಯುಕ್ತ ಪ್ರೌಢ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಸೌಲಭ್ಯಗಳಿದ್ದರೂ ಸರಿಯಾಗಿ ಓದದ ಹಾಗೂ ಮನೆಯಲ್ಲಿ ಕಷ್ಟಗಳಿಂದ ಓದಲು ಸಾಧ್ಯವಾಗದೇ ಇರುವ ಅನೇಕ ಮಕ್ಕಳಿಗೆ ಶ್ರೀಕುಮಾರಿ ಮಾದರಿಯಾಗಿದ್ದಾಳೆ.
ಶ್ರೀ ಕುಮಾರಿಯ ಸಾಧನೆಗೆ ಶಿಕ್ಷಕ ರಾಜೇಶ್ ಇನ್ನಂಜೆ ಸೇರಿದಂತೆ ಇತರೆ ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿನಿಯ ಮುಂದಿನ ಭವಿಷ್ಯ ಉಜ್ವಲವಾಗಲಿ, ಮುಂದೆಯೂ ಇವಳು ಉನ್ನತ ಸಾಧನೆ ಮಾಡುವಲ್ಲಿ ಕರಾವಳಿಯ ಪ್ರಜ್ಞಾವಂತ ಸಮಾಜ ದಾರಿ ತೋರಬೇಕೆಂದು ಶಿಕ್ಷಕರು ಆಶೀರ್ವದಿಸಿದ್ದಾರೆ.