-ಅಕ್ಷಯ್ ಕುಮಾರ್ .ಯು.
ಬಿಜೆಪಿಯೂ ಧರ್ಮ ರಾಜಕಾರಣ, ದೇಶಭಕ್ತಿ ರಾಜಕಾರಣ:
ಕಟು ಹಿಂದುತ್ವ ಅಜೆಂಡಾದಲ್ಲಿ ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬರಬಹುದೇ ಭಾರತೀಯ ಜನತಾ ಪಕ್ಷ…? ಚುನಾವಣೆಗಳಲ್ಲಿ ಬಿಜೆಪಿ ಪ್ರಮುಖ ಅಸ್ತ್ರವೇ ಹಿಂದುತ್ವ. ಧರ್ಮ ರಾಜಕಾರಣ ಮತ್ತು ದೇಶಭಕ್ತಿ ರಾಜಕಾರಣವೇ ಮತಗಳನ್ನು ಸೆಳೆದು ತರಲಿದೆ, ಅವೆರಡಿದ್ದರೆ ಮತಗಳ ಕ್ರೋಢೀಕರಣ ಆಗಲಿದೆ ಎನ್ನುವುದು ಬಿಜೆಪಿಯ ಸದಾ ಕಾಲದ ಲೆಕ್ಕಾಚಾರ.
ಧರ್ಮ ರಾಜಕಾರಣ ಮಾಡದೇ ಇದುವರೆಗೂ ಬಿಜೆಪಿ ಯಾವುದೇ ಚುನಾವಣೆಗಳನ್ನು ಎದುರಿಸಿಯೇ ಇಲ್ಲ, ಎದುರಿಸಲ್ಲ ಕೂಡಾ. ಧರ್ಮ ಮತ್ತು ದೇಶಭಕ್ತಿ ರಾಜಕಾರಣ ಬಿಜೆಪಿ ಪಾಲಿಗೆ ನೀರು ಇದ್ದಂತೆ, ಅವಿಲ್ಲದೇ ಹೋದರೆ ನೀರಿನಿಂದ ತೆಗೆದ ಮೀನಿನಂತೆ ಕೊಸರಾಡಬಹುದು ಬಿಜೆಪಿ, ಮೀನಿಗೆ ನೀರು ಹೇಗೋ ಹಾಗೆಯೇ ಬಿಜೆಪಿಗೆ ದೇಶಭಕ್ತಿ ರಾಜಕಾರಣ ಮತ್ತು ಧರ್ಮರಾಜಕಾರಣ.
ಪಂಚರಾಜ್ಯಗಳಲ್ಲಿ ಅದರಲ್ಲೂ ಉತ್ತರಪ್ರದೇಶ ಮತ್ತು ಉತ್ತರಾಖಂಡ್ನಲ್ಲಿ ಸತತ ಎರಡನೇ ಬಾರಿಯೂ ಅಧಿಕಾರಕ್ಕೆ ಬಂದು ಇತಿಹಾಸ ನಿರ್ಮಿಸಿರುವ ಕೇಸರಿ ಪಾಳಯ ಈಗ ಕರ್ನಾಟಕದಲ್ಲೂ ಅಂಥದ್ದೇ ಪ್ರಯೋಗಕ್ಕೆ ಇಳಿದಿದೆ. ಹಿಂದೂ ಸಂಘಟನೆಗಳು ದಿನಕ್ಕೊಂದರಂತೆ ಎಬ್ಬಿಸುತ್ತಿರುವ ವ್ಯವಸ್ಥಿತ ಗುಲ್ಲಿಗೆ ಬಿಜೆಪಿ ನಾಯಕರು ಮುಂಚೂಣಿಯಲ್ಲಿ ನಿಂತು ಕೂಗೆಬ್ಬಿಸಿ ವಿಧಾನಸಭಾ ಚುನಾವಣೆಗೆ ಇನ್ನೊಂದು ವರ್ಷ ಬಾಕಿ ಇರುವಂತೆಯೇ ಧರ್ಮಾಧಾರಿತ ಮತ ಧ್ರುವೀಕರಣಕ್ಕೆ ನೀರು ಎರೆದು ಪೋಷಿಸುತ್ತಿದ್ದಾರೆ.
ಹಾಗಾದರೆ ಕಟು ಹಿಂದುತ್ವ ಅಜೆಂಡಾವನ್ನೇ ನಂಬಿಕೊಂಡು, ನೆಚ್ಚಿಕೊಂಡು ಅಧಿಕಾರಕ್ಕೆ ಬರಬಹುದೇ ಕೇಸರಿ ಕೂಟ..? ಇದರ ಬಗ್ಗೆ ಕಳೆದ 2 ವಿಧಾನಸಭಾ ಚುನಾವಣೆಗಳ ಅಂಕಿಅಂಶಗಳನ್ನು ನಾವು ನೋಡಿದರೆ ನಮಗೆ ಮೇಲ್ನೋಟಕ್ಕೊಂದು ಉತ್ತರ ಸಿಗಬಹುದು.
2013 ಮತ್ತು 2018:
2013ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಅತಂತ್ರ, ಅಭದ್ರ ಸರ್ಕಾರಕ್ಕೆ ಇತಿಶ್ರೀ ಹಾಡಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ಗೆ ಪೂರ್ಣ ಬಹುಮತ ಕೊಟ್ಟ ಚುನಾವಣೆ. ಈ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆ ಮತ್ತು ಗಣಿ ಹಗರಣದ ಸುಳಿಗೆ ಸಿಲುಕಿ ಬಿಜೆಪಿ ಗಿರ್ಗಿಟ್ಲೆ ಆಯ್ತು, ಜೊತೆಗೆ ಯಡಿಯೂರಪ್ಪನವರು ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದ್ದು ಮರ್ಮಾಘಾತವನ್ನೇ ನೀಡಿತು. ಆದರೆ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆಡಳಿತ ವಿರೋಧಿ ಅಲೆಯ ಜೊತೆಗೆ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಎಬ್ಬಿಸಿದ ಹಿಂದೂ ವಿರೋಧಿ ನಾಯಕ ಎಂಬ ಗುಲ್ಲು ಬಿಜೆಪಿಗೆ ಅಧಿಕಾರಕ್ಕೇರಲು ಸಹಾಯಕವಾಯಿತು ಎಂದು ವಾದಿಸಲಾಯಿತು.
ಆದರೆ 2013 ಮತ್ತು 2018ರಲ್ಲಿ ಮುಸಲ್ಮಾನ ಪ್ರಾಬಲ್ಯದ 33 ಕ್ಷೇತ್ರಗಳಲ್ಲಿನ ಫಲಿತಾಂಶ ಹೇಗಿತ್ತು ನೋಡೋಣ. ರಾಜ್ಯದಲ್ಲಿ ಮುಸಲ್ಮಾನರ ಜನಸಂಖ್ಯೆ ಶೇಕಡಾ 15.
2013ರಲ್ಲಿ ಕಾಂಗ್ರೆಸ್ 19 ಸ್ಥಾನಗಳಲ್ಲೂ, ಬಿಜೆಪಿ 6 ಕ್ಷೇತ್ರಗಳಲ್ಲೂ ಜೆಡಿಎಸ್ ಐದರಲ್ಲೂ ಪಕ್ಷೇತರರು ನಾಲ್ಕು ಕ್ಷೇತ್ರಗಳಲ್ಲೂ ಗೆದ್ದುಬಂದರು.
ಆದರೆ 2018ರಲ್ಲಿ ಕಾಂಗ್ರೆಸ್ 15, ಬಿಜೆಪಿ 15 ಸೀಟು ಮತ್ತು ಜೆಡಿಎಸ್ 3 ಸೀಟುಗಳನ್ನು ಗೆದ್ದುಕೊಂಡಿತ್ತು.
CM ಗೆದ್ದಿದ್ದೂ ಮುಸಲ್ಮಾನರ ಮತಗಳಿಂದಲೇ:
ಹೀಗೆ ಮುಸಲ್ಮಾನ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಗೆದ್ದವರ ಪೈಕಿ ಈಗ ರಾಜ್ಯದಲ್ಲಿ ಮುಸಲ್ಮಾನ ಸಮುದಾಯದ ಮೇಲಾಗುತ್ತಿರುವ ಕೃತ್ಯಗಳನ್ನು ಮೂಕಪ್ರೇಕ್ಷರಂತೆ ನೋಡುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಾ ಒಬ್ಬರು. ಇವರು ಪ್ರತಿನಿಧಿಸ್ತಿರುವ ಶಿಗ್ಗಾಂವಿ ಕ್ಷೇತ್ರವೂ ಒಂದು.
ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಎಂಬ ಬಿಜೆಪಿಯ ವ್ಯವಸ್ಥಿತ ಅಭಿಯಾನದ ಹೊರತಾಗಿಯೂ ಮುಸಲ್ಮಾನ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ನಷ್ಟ ಮಾಡುವಲ್ಲಿ 2018ರಲ್ಲಿ ಬಿಜೆಪಿ ವಿಫಲ ಆಗಿತ್ತು. ಕಾಂಗ್ರೆಸ್ ಆಗಿರುವುದು ಕೇವಲ 4 ಸೀಟುಗಳ ನಷ್ಟವಷ್ಟೇ, ಬಿಜೆಪಿ ತನ್ನ ಸೀಟು ಹೆಚ್ಚಿಸಿಕೊಂಡಿದ್ದು ಜೆಡಿಎಸ್ ಮತ್ತು ಪಕ್ಷೇತರರ ನಷ್ಟದಲ್ಲಿ.
ಹಿಂದುತ್ವದಿಂದ ಅಧಿಕಾರಕ್ಕೆ ಬಂದಿದ್ದಲ್ಲ ಬಿಜೆಪಿ:
ಅಂದರೆ 2018ರಲ್ಲಿ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲು (ಬಿಜೆಪಿಗೆ ಬಹುಮತ ಸಿಕ್ಕಿರಲಿಲ್ಲ, ಸಿಕ್ಕಿದ್ದು 104 ಸೀಟು ಬಹುಮತಕ್ಕಿಂತಲೂ 8 ಸೀಟುಗಳು ಕಡಿಮೆ) ಕಾರಣವಾಗಿದ್ದು ಲಿಂಗಾಯತ ಮತ್ತು ದಲಿತ ಪ್ರಾಬಲ್ಯದ ಮತ ಕ್ಷೇತ್ರಗಳನ್ನು ಹೆಚ್ಚು ಗೆದ್ದಿದ್ದರಿಂದ. ಈ ಕ್ಷೇತ್ರಗಳಲ್ಲಿ ಹಿಂದುತ್ವಕ್ಕಿಂತ ಹೆಚ್ಚಾಗಿ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗ್ತಾರೆ ಮತ್ತು ದಲಿತ ಸಮುದಾಯದಲ್ಲಿ ಎಡಗೈ-ಬಲಗೈ ಸಂಘರ್ಷದ ಲಾಭವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಬಿಜೆಪಿ ಸಫಲ ಆಗಿತ್ತು.
ಹಿಂದುತ್ವದಿಂದ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ:
ಈ ಕಾರಣಗಳಿಂದಾಗಿಯೇ ಕೆಲ ದಿನಗಳ ಹಿಂದೆಯಷ್ಟೇ ದೆಹಲಿ ಯಾತ್ರೆ ಕೈಗೊಂಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವರಿಷ್ಠರು ಹೇಳಿ ಕಳುಹಿಸಿರುವ ಬುದ್ಧಿಮಾತು ಎಂದರೆ, `ಹಿಜಬ್, ಹಲಾಲ್ ಕಟ್ ಕಟ್ಟರ್ ಹಿಂದೂಗಳ ಮತಗಳನ್ನು ಸೆಳೆಯಬಹುದಷ್ಟೇ, ಇದರಿಂದ ಪಕ್ಷವನ್ನು ಅಧಿಕಾರಕ್ಕೆ ತರಲು ಸಾಧ್ಯವಿಲ್ಲ. ಅಭಿವೃದ್ಧಿ ಮತ್ತು ಆಡಳಿತದ ವಿಷಯದ ಮೇಲೆ ಹೋದರಷ್ಟೇ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯ, ಅದರ ಮೇಲೆ ಗಮನಹರಿಸಿ’ ಎಂದು ಮುಖ್ಯಮಂತ್ರಿಗೆ ಸೂಚಿಸಿ ಕಳುಹಿಸಿದ್ದಾರೆ.
ಅತಿಯಾದರೇ ಅಮೃತವೂ ವಿಷ:
ಈ ಗಾದೆ ಕರ್ನಾಟಕದಲ್ಲಿ ಬಿಜೆಪಿಯ ಹಿಂದುತ್ವ ಅಜೆಂಡಾಕ್ಕೂ ಅನ್ವಯ ಆಗುತ್ತದೆ. ಕರ್ನಾಟಕದಲ್ಲಿ ಈಗ ಆಗುತ್ತಿರುವ ಘಟನಾವಳಿಗಳು ಕರ್ನಾಟಕ ರಾಜ್ಯದ ಒಟ್ಟು ಗೌರವಕ್ಕೆ ಘಾಸಿ ಮಾಡಿದೆ. ಸಹಬಾಳ್ವೆ, ಸಹನೆ, ಸದ್ಭಾವನೆಗಳ ನೆಲೆವೀಡು, ಸರ್ವಜನಾಂಗಗಳ ಶಾಂತಿಯ ತೋಟದಲ್ಲಿ ಈಗ ಕೋಮು ಸಂಘರ್ಷದ ದಳ್ಳುರಿ. ದಿನ ಬೆಳಗಾದ್ರೆ ಒಂದಲ್ಲ ಒಂದು ಧರ್ಮ ರಾಜಕಾರಣದ ವಿಷಯಗಳನ್ನು ಕೆದಕಿ ಬಿಜೆಪಿ ಮತ್ತದರ ಸಹವರ್ತಿ ಸಂಘಟನೆಗಳು ಎಬ್ಬಿಸುತ್ತಿರುವ ಕೂಗು ರಾಜ್ಯದ ಒಟ್ಟು ಹಿತಾಸಕ್ತಿಗೆ ಒಳಿತಲ್ಲ ಎನ್ನುವುದು ಬಹುಜನರ ಅಭಿಪ್ರಾಯ. ಇದು ಬೇಡವಾಗಿತ್ತೇನೋ, ಇದು ಅತಿಯಾಯಿತೇನೋ ಎಂದು ಹಿಂದೂಗಳೇ ಭಾವಿಸುವವರೆಗೆ ಸಿಎಂ ಬೊಮ್ಮಾಯಿ ಸರ್ಕಾರದ ಮೂಗಿನ ಕೆಳಗೆ ಬಿಜೆಪಿ ಕೃಷಾಪೋಷಿತ ಸಂಘರ್ಷಗಳು ನಡೆಯುತ್ತಿರುವುದು ರಾಜ್ಯದ ದೀಘಕಾಲದ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಮಾರಕವಾಗಿ ಕಾಡಬಹುದು ಎಂಬ ಹಲವರ ಆತಂಕ ನಿಜ ಆಗಬಹುದು.
ಬಹುಮತ ಸಿಗದೇ ಹೋದರೂ ಆಪರೇಷನ್ ಕಮಲದಿಂದ ಅಧಿಕಾರಕ್ಕೆ ಬಂದ ಬಿಜೆಪಿ ತಾನು ಮೂರ್ನಾಲ್ಕು ವರ್ಷಗಳಲ್ಲಿ ಮಾಡಿದ್ದೇನು, ಸಾಧಿಸಿದ್ದೇನು ಎನ್ನುವ ಆಧಾರದಲ್ಲಿ ಮತ ಕೇಳುವ ಬದಲು ಧರ್ಮ ರಾಜಕಾರಣದ ಕೊಳ್ಳಿಯನ್ನೇ ಮುಂದಿಡಿದು ಹೋಗುತ್ತಿರುವುದು ಜನಸಾಮಾನ್ಯರಲ್ಲೂ `ಇವರದ್ದೂ ಬರೀ ಇದೆ ಆಯ್ತಲ್ಲ’ ಎನ್ನುವ ಅಸಮಾಧಾನ ಸೃಷ್ಟಿಸಿರುವುದೂ ನಿಜ. ಭ್ರಷ್ಟಾಚಾರ, ಸಾಲು-ಸಾಲು ಕೋವಿಡ್ ಹಗರಣಗಳು, ಆಡಳಿತ ವಿರೋಧಿ ಅಲೆ, ಹದಗೆಟ್ಟು ಕಾನೂನು ಸುವ್ಯವಸ್ಥೆ, ಬೆಲೆ ಏರಿಕೆ ಇವೆಲ್ಲವನ್ನು ಮುಚ್ಚಿಹಾಕಲೆಂದೇ ಹಿಂದುತ್ವದ ಮುಖವಾಡದ ಹಾಕಿಕೊಂಡು ಹೋಗುತ್ತಿದೆ ಎನ್ನುವುದು ಜನಸಾಮಾನ್ಯರ ಅಸಮಾಧಾನ.
ಕೊನೆಯದಾಗಿ:
ಕರ್ನಾಟಕ ಉತ್ತರಪ್ರದೇಶ ಆಗುವುದು ಬೇಡ, ಆಗದೇ ಇರಲಿ ಎಂದು ಆಶಿಸೋಣ. ನಮ್ಮ ಕರ್ನಾಟಕವೇ ನಮಗೆ ಚೆನ್ನ, ಅದೇ ಸುಂದರ, ಕರ್ನಾಟಕ ಸದಾ ಶಾಂತಿ, ಧರ್ಮ ಸಾಮರಸ್ಯದ ನೆಲೆವೀಡಾಗಿರಲಿ ಎಂದೇ ಆಶಿಸೋಣ. `ಕರ್ನಾಟಕ ಎಂದರೆ ಒಂದು ರಾಜ್ಯ, ಹಲವು ಜಗತ್ತು’ ಎಂದು ಪ್ರಸಿದ್ಧ ಘೋಷವಾಕ್ಯ ಸದಾ ಜೀವಂತವಾಗಿರಲಿ, ವೈವಿಧ್ಯತೆಯ ನೆಲೆವೀಡಿಗೆ ಕಿಂಚಿತ್ತೂ ಧಕ್ಕೆ ಆಗದೇ ಇರಲಿ.