ಪಾವಗಡ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಮಂತ್ರಿ ವೆಂಕಟರಮಣಪ್ಪ ಪುತ್ರ ಹೆಚ್ ವಿ ವೆಂಕಟೇಶ್ ಗೆಲುವು ಸಾಧಿಸಿ, ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸುತ್ತಿದ್ದಾರೆ. ಜೆಡಿಎಸ್ ಮತ್ತೊಮ್ಮೆ ಸೋತಿದೆ. ಪಾವಗಡದಲ್ಲಿ ಹೆಚ್ವಿ ವೆಂಕಟೇಶ್ ಗೆಲುವಿಗೆ,ತಿಮ್ಮರಾಯಪ್ಪ ಸೋಲಿಗೆ ಹಲವು ಕಾರಣ.. ಅವುಗಳೇನು ಎಂಬುದನ್ನು ನೋಡೋಣ
10ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು
ಹೆಚ್ ವಿ ವೆಂಕಟೇಶ್ ಗಳಿಸಿದ ಮತಗಳು 83,062 ಮತ.. ತಿಮ್ಮರಾಯಪ್ಪ ಗಳಿಸಿದ ಮತಗಳ ಸಂಖ್ಯೆ 73,181.. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿನ ಅಂತರ 10,881
ಇಲ್ಲಿ ಜೆಡಿಎಸ್, ಕಾಂಗ್ರೆಸ್ ಪಕ್ಷಗಳು ಹೊರತುಪಡಿಸಿ ಉಳಿದೆಲ್ಲಾ ಪಕ್ಷಗಳು ಡಿಪಾಸಿಟ್ ಕೂಡ ಕಳೆದುಕೊಂಡಿವೆ.
ಹೆಚ್.ವಿ ವೆಂಕಟೇಶ್ ಗೆಲುವಿನ ಅಂತರದಷ್ಟು ಮತಗಳನ್ನು (10,881) ಕೂಡ ಇತರೆ ಅಭ್ಯರ್ಥಿಗಳು ಪಡೆದುಕೊಂಡಿಲ್ಲ
ನಿರಾಸೆ ಮೂಡಿಸಿದ ನೇರಳಕುಂಟೆ ನಾಗೇಂದ್ರ
ಒಂದು ಹಂತದಲ್ಲಿ ಭಾರೀ ಭರವಸೆ ಮೂಡಿಸಿದ್ದ ಕೆಆರ್ಪಿಪಿ ಅಭ್ಯರ್ಥಿ ನೇರಳಕುಂಟೆ ನಾಗೇಂದ್ರ ಪಡೆದ ಮತಗಳು ಬಹುಷಃ ಅವರಿಗೆ ಶಾಕ್ ನೀಡಿವೆ.. ಚಲಾವಣೆಯಾದ ಒಟ್ಟು ಮತಗಳಲ್ಲಿ ಅವರು ಶೇಕಡಾ ಒಂದರಷ್ಟು ಮತಗಳನ್ನು ಪಡೆಯದಿರುವುದು ವಿಪರ್ಯಾಸ.. ನೆರಳಕುಂಟೆ ನಾಗೇಂದ್ರ ಪಡೆದ ಮತಗಳ ಸಂಖ್ಯೆ ಕೇವಲ 875.. ಶೇಕಡವಾರು ಮತ ಪ್ರಮಾಣ 0.52.
ನೇರಳಕುಂಟೆ ನಾಗೇಂದ್ರ ಮತ್ತು ತಿಮ್ಮರಾಯಪ್ಪ ಒಂದೇ ಸಮುದಾಯದವರಾದ ಕಾರಣ ಆ ಸಮುದಾಯದ ಮತಗಳು ವಿಭಜನೆ ಆಗಬಹುದು.. ಇದು ತಿಮ್ಮರಾಯಪ್ಪ ಸೋಲಿಗೆ ಕಾರಣ ಆಗಬಹುದು ಎಂಬ ವಿಶ್ಲೇಷಣೆ ಕೇಳಿಬಂದಿತ್ತು. ಆದರೆ, ಆ ಸಮುದಾಯದ ಮತಗಳು ವಿಭಜನೆ ಆಗದೆಯೂ ತಿಮ್ಮರಾಯಪ್ಪ ಸೋಲು ಅನುಭವಿಸಿದ್ದಾರೆ. ಹೆಚ್ ವಿ ವೆಂಕಟೇಶ್ ಗೆಲುವು ಸಾಧಿಸಿದ್ದಾರೆ.
ಮತದಾನಕ್ಕೆ ಮುನ್ನ ನೇರಳಕುಂಟೆ ನಾಗೇಂದ್ರ ಸೈಲೆಂಟ್ ಆಗಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಕೃಷ್ಣನಾಯ್ಕ್ ಸೈಲೆಂಟ್.. ಕೈಕೊಟ್ಟ ಕಾರ್ಯಕರ್ತರು
ಬಿಜೆಪಿ ಅಭ್ಯರ್ಥಿ ಕೃಷ್ಣನಾಯ್ಕ್ ಮತ್ತೊಮ್ಮೆ ಸೋತಿದ್ದಾರೆ. ಕೇವಲ 7206 ಮತಗಳನ್ನಷ್ಟೇ ಪಡೆದಿದ್ದಾರೆ. ಶೇಕಡಾ 4.5ರಷ್ಟು ಮತಗಳನ್ನು ಮಾತ್ರ ಪಡೆದಿದ್ದಾರೆ. ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಬಲರಾಮ್ ಪಡೆದಷ್ಟು ಮತಗಳನ್ನು ಪಡೆದಿಲ್ಲ.
ಮತದಾನಕ್ಕೆ ಮುನ್ನಾ ಎರಡ್ಮೂರು ದಿನ ಕೃಷ್ಣನಾಯ್ಕ್ ಪ್ರಚಾರವನ್ನೇ ಮಾಡಲಿಲ್ಲ. ಸಂಪೂರ್ಣವಾಗಿ ಸೈಲೆಂಟ್ ಆದರು. ಪರಿಣಾಮ ಬಿಜೆಪಿ ಬೆಂಬಲಿಸುವವರು ಅನಿವಾರ್ಯವಾಗಿ ಮನಸ್ಸು ಬದಲಿಸುವಂತಾಯಿತು
ಎಂದು ಬಿಜೆಪಿ ಕಾರ್ಯಕರ್ತರೇ ಮಾತನಾಡಿಕೊಳ್ಳುತ್ತಿದ್ದಾರೆ.
ಎಎಪಿ ಅಭ್ಯರ್ಥಿ ಎನ್.ರಾಮಾಂಜಿನಪ್ಪ ಕೂಡ ಹೆಚ್ಚಿನ ಮತಗಳನ್ನೇನು ಪಡೆದಿಲ್ಲ. ಆದರೆ, ನೇರಳಕುಂಟೆ ನಾಗೇಂದ್ರಗೆ ಹೋಲಿಸಿದರೇ ಇವರೇ ಬೆಟರ್.. ಇವರು ಗಳಿಸಿರುವ ಮತಗಳ ಸಂಖ್ಯೆ 1831.. ಮತ ಪ್ರಮಾಣ ಶೇಕಡಾ 1.09ರಷ್ಟು ಮಾತ್ರ.
ಚೀಫ್ ಎಂಜಿನಿಯರ್ ಸಣ್ಣಚಿತ್ತಪ್ಪನ ಜಿದ್ದು ಫಲಿಸಲಿಲ್ಲ
ಶಾಸಕ ವೆಂಕಟರಮಣಪ್ಪ ಮತ್ತು ಹೆಚ್ವಿ ವೆಂಕಟೇಶ್ ಜೊತೆ ವೈಮನಸ್ಸಿನ ಕಾರಣ ಗೊಲ್ಲ ಸಮುದಾಯ ಪ್ರಭಾವಿ, ಅತೀವ ರಾಜಕೀಯ ಮಹತ್ವಾಕಾಂಕ್ಷೆ ಹೊಂದಿರುವ ಚೀಫ್ ಎಂಜಿನಿಯರ್ ಸಣ್ಣಚಿತ್ತಯ್ಯ ದಿಢೀರ್ ಎಂದು ಜೆಡಿಎಸ್ ಬೆಂಬಲಿಸಿದ್ದರು. ಇದರಿಂದಾಗಿ ಇಡೀ ಗೊಲ್ಲ ಸಮುದಾಯದ ಮತಗಳು ಕಾಂಗ್ರೆಸ್ ಕೈತಪ್ಪಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಅಪ್ಪ ಮಕ್ಕಳಾದ ವೆಂಕಟರಮಣಪ್ಪ-ಹೆಚ್ ವಿ ವೆಂಕಟೇಶ್ ಜೋಡಿ ಹಳ್ಳಿ ಹಳ್ಳಿಗೆ ತೆರಳಿ ಸಭೆ ಮಾಡಿ ಯಾದವ ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಭಾವ್ಯ ಅಪಾಯದಿಂದ ಪಾರಾದರು.
ಮುಸ್ಲಿಮರು, ಎಸ್ಟಿ ಸಮುದಾಯ, ಎಸ್ಸಿ ಸಮುದಾಯದ ಬಲಗೈ ವರ್ಗ ಸಂಪೂರ್ಣವಾಗಿ ಬೆಂಬಲಿಸಿದ ಕಾರಣ ವೆಂಕಟೇಶ್ ಗೆಲುವು ಸರಾಗವಾಯಿತು ಎಂದು ಹೇಳಲಾಗುತ್ತಿದೆ.