ಮಸೀದಿಯಲ್ಲಿ ಶ್ರೀರಾಮ ಘೋಷಣೆ ಕೂಗುವುದು ಹೇಗೆ ಅಪರಾಧವಾಗುತ್ತದೆ ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ.
ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಪೀಠ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ಇವತ್ತು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಪಂಕಜ್ ಮಿತ್ತಲ್ ಮತ್ತು ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಪೀಠದಲ್ಲಿ ನಡೆಯಿತು.
ಈ ವೇಳೆ ಮೇಲ್ಮನವಿ ಸಲ್ಲಿಸಿದ್ದ ಅರ್ಜಿದಾದ ಹೈದರ್ಅಲಿ ಸಿ.ಎಂ. ಅವರ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ದೇವದತ್ತ್ ಕಾಮತ್ ಅವರು ʻಎಫ್ಐಆರ್ ದಾಖಲಾದ ಕೇವಲ 20 ದಿನದಲ್ಲೇ ತನಿಖೆಗೆ ಹೈಕೋರ್ಟ್ ತಡೆ ನೀಡಿತ್ತು, ಇನ್ನೂ ತನಿಖೆ ಪ್ರಾಥಮಿಕ ಹಂತದಲ್ಲೇ ಇರುವಾಗʼ ಎಂದು ವಾದಿಸಿದರು.
ʻಅದು ಸರಿ, ಅವರು ನಿರ್ದಿಷ್ಟ ಧಾರ್ಮಿಕ ಘೋಷಣೆಯನ್ನು ಕೂಗಿದರು. ಅದು ಹೇಗೆ ಅಪರಾಧವಾಗುತ್ತದೆ..?ʼ ಎಂದು ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರು ಪ್ರಶ್ನಿಸಿದರು.
ʻಇನ್ನೊಂದು ಧರ್ಮಕ್ಕೆ ಸೇರಿದ ಸ್ಥಳದಲ್ಲೇ ಬೇರೊಂದು ಧರ್ಮದ ಘೋಷಣೆಯನ್ನು ಕೂಗುವುದು ಧಾರ್ಮಿಕ ಭಾವನೆಯನ್ನು ಕೆರಳಿಸಬಹುದು. ಇದು ಭಾರತೀಯ ದಂಡ ಸಂಹಿತೆ ಕಲಂ 153ಎ ಅಡಿಯಲ್ಲಿ ಅಪರಾಧವಾಗಿದೆʼ ಎಂದು ದೇವದತ್ತ್ ಕಾಮತ್ ಅವರು ವಾದಿಸಿದರು.
ʻಆರೋಪಿಗಳನ್ನು ಪತ್ತೆ ಹಚ್ಚಲಾಗಿದೆಯೇ..?ʼ ಎಂದು ನ್ಯಾಯಪೀಠ ಪ್ರಶ್ನಿಸಿತು.
ʻಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಲಾಗಿತ್ತು ಮತ್ತು ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಈ ಬಗ್ಗೆ ಕಸ್ಟಡಿ ವರದಿಯಲ್ಲಿ ಪೊಲೀಸರು ಉಲ್ಲೇಖ ಮಾಡಿದ್ದಾರೆʼ ಎಂದು ದೇವದತ್ತ್ ಕಾಮತ್ ಅವರು ಉತ್ತರಿಸಿದರು.
ʻಕೇವಲ ಮಸೀದಿಯ ಬಳಿ ಆರೋಪಿಗಳು ಕಾಣಿಸಿಕೊಂಡರು ಎಂಬ ಮಾತ್ರಕ್ಕೆ ಅವರು ಘೋಷಣೆ ಕೂಗಿದ್ದಾರೆ ಎಂದು ಅರ್ಥವೇ..?ʼ ಎಂದು ಪೀಠ ಮತ್ತೆ ಪ್ರಶ್ನಿಸಿತು.
ʻನೀವು ಆರೋಪಿಗಳನ್ನು ಪತ್ತೆ ಹಚ್ಚಲು ಸಾಧ್ಯವೇ..? ನಿಮ್ಮ ಬಳಿ ಏನು ಆಧಾರಗಳಿವೆ..?ʼ ಎಂದು ನ್ಯಾಯಾಲಯ ಪ್ರಶ್ನಿಸಿತು.
ʻನಾನು ಮಸೀದಿಯನ್ನು ನೋಡಿಕೊಳ್ಳುವವರ ಪರವಷ್ಟೇ ವಾದಿಸುತ್ತಿದ್ದೇನೆ. ತನಿಖೆ ನಡೆಸಿ ಸಾಕ್ಷ್ಯಗಳನ್ನು ಸಂಗ್ರಹಿಸುವುದು ಪೊಲೀಸರ ಕೆಲಸ. ಎಫ್ಐಆರ್ನಲ್ಲಿ ಕೃತ್ಯದ ಬಗ್ಗೆ ಮಾಹಿತಿಯಿದೆಯಷ್ಟೇ. ಎಫ್ಐಆರ್ ಎಲ್ಲ ಸಾಕ್ಷ್ಯಗಳನ್ನು ಒಳಗೊಂಡ ಎನ್ಸೈಕ್ಲೋಪಿಡಿಯಾ ಆಗಲ್ಲʼ ಎಂದು ವಕೀಲ ದೇವದತ್ತ್ ಕಾಮತ್ ಅವರು ಉತ್ತರಿಸಿದರು.
ʻಮಸೀದಿಯೊಳಗೆ ಜೈ ಶ್ರೀರಾಮ್ ಘೋಷಣೆ ಕೂಗುವುದು ಅಪರಾಧವೇ..?ʼ ಎಂಬ ಬಗ್ಗೆ ಅಭಿಪ್ರಾಯ ಸಲ್ಲಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚಿಸಿ ಸುಪ್ರೀಂಕೋರ್ಟ್ ವಿಚಾರಣೆಯನ್ನು ಜನವರಿಗೆ ಮುಂದೂಡಿತು.
ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಐತೂರು ಗ್ರಾಮದ ಮರ್ದಾಲಾದಲ್ಲಿರುವ ಬದ್ರಿಯ ಜಮ್ಮಾ ಮಸೀದಿಗೆ ಪ್ರವೇಶಿಸಿದ್ದ ಅಪರಿಚಿತರು ಜೈ ಶ್ರೀರಾಮ್ ಘೋಷಣೆಯನ್ನು ಕೂಗಿದ್ದರು. ಈ ಸಂಬಂಧ ಎಫ್ಐಆರ್ ದಾಖಲಾಗಿತ್ತು. ಕಡಬ ಪೊಲೀಸರು ಸೆಪ್ಟೆಂಬರ್ 25, 2023ರಂದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು ಮತ್ತು ಆ ಆರೋಪಿಗಳಿಗೆ ಸೆಪ್ಟೆಂಬರ್ 29, 2023ರಂದು ಜಾಮೀನು ಮಂಜೂರಾಗಿತ್ತು. ಇದಾದ ಬಳಿಕ ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಆರೋಪಿಗಳು ಅರ್ಜಿಯನ್ನು ಸಲ್ಲಿಸಿದ್ದರು. ಪುತ್ತೂರಿನ ಜೆಎಂಎಫ್ಸಿ ನ್ಯಾಯಾಲಯದಲ್ಲಿ ನಡೀತಿದ್ದ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ತಡೆ ನೀಡಿತ್ತು. ಅದಾದ ಬಳಿಕ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠ ಪ್ರಕರಣವನ್ನೇ ರದ್ದುಗೊಳಿಸಿತ್ತು.
ಕೇವಲ ಧಾರ್ಮಿಕ ಘೋಷಣೆಗಳನ್ನು ಕೂಗುವುದರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗಲ್ಲ ಎಂದು ಮಹೇಂದ್ರ ಸಿಂಗ್ ಧೋನಿ ಪ್ರಕರಣದಲ್ಲಿ 2017ರಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಪ್ರಕರಣವನ್ನೇ ರದ್ದುಗೊಳಿಸಿದ್ದರು.
ADVERTISEMENT
ADVERTISEMENT