ಕರ್ನಾಟಕದಲ್ಲಿ ದಯನೀಯ ಸ್ಥಿತಿ ತಲುಪಿದ ಕುಮಾರಸ್ವಾಮಿ ಪಕ್ಷದ ಸ್ಥಿತಿ. ಪ್ರಬಲ ಪ್ರಾದೇಶಿಕ ಪಕ್ಷವಾದರೂ ಬಿಜೆಪಿ ಎದುರು ಲೋಕಸಭಾ ಸೀಟಿಗಾಗಿ, ಮರ್ಯಾದೆಗಾಗಿ ಅಂಗಲಾಚಿ ಬೇಡಿಕೊಳ್ಳುವ ದುಸ್ಥಿತಿಗೆ ಬಂದ ದೇವೇಗೌಡರು ಕಟ್ಟಿದ ಪಕ್ಷದ ಸ್ಥಿತಿ.
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಈ ಬಾರಿ ಜೆಡಿಎಸ್ ಜೊತೆಗೆ ಮೈತ್ರಿ ಅಗತ್ಯ ಇರುವುದು ಬಿಜೆಪಿಗೇ ಹೊರತು ಜೆಡಿಎಸ್ಗಲ್ಲ. ಆದರೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ಜೆಡಿಎಸ್ ಹಂಗಾಮಿ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸೈದ್ಧಾಂತಿಕ ಅಬದ್ಧತೆ ಮತ್ತು ಗೊಂದಲ ಜೆಡಿಎಸ್ನ್ನು ಬಿಜೆಪಿ ಎದುರು ಮಂಡಿಯೂರುವಂತೆ ಮಾಡಿದೆ.
ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಎದುರು ಜೆಡಿಎಸ್ ತನ್ನ ಹಕ್ಕು ಸ್ಥಾಪನೆ ಮಾಡ್ಬೇಕಿತ್ತು. ತನ್ನ ಅಸ್ತಿತ್ವದ ಉಳಿವಿಗಾಗಿ ಬಿಜೆಪಿಯನ್ನೇ ತನ್ನ ಮನೆ ಬಾಗಿಲಿಗೆ ಕರೆಸಿಕೊಳ್ಳಬೇಕಿತ್ತು. ಆದರೆ ಬಿಜೆಪಿ ರಾಷ್ಟ್ರೀಯ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜೆಡಿಎಸ್ನ್ನು ನಡೆಸಿಕೊಳ್ಳುತ್ತಿರುವ ರೀತಿ ನೋಡಿದರೆ ಕರ್ನಾಟಕದ ನೆಲದಲ್ಲೇ ಹುಟ್ಟಿದ ಪ್ರಾದೇಶಿಕ ಪಕ್ಷವೊಂದರ ಸ್ಥಿತಿ ಇಲ್ಲಿಗೆ ಬಂತೇ ಎಂದು ಅಚ್ಚರಿ ಮತ್ತು ವಿಷಾದವಾಗುತ್ತದೆ.
ಹಾಗೆ ನೋಡಿದರೆ ಲೋಕಸಭೆ ಚುನಾವಣೆ ಬಿಜೆಪಿ ತನಗೆ ಅನಿವಾರ್ಯ ಇರುವ ರಾಜ್ಯಗಳಲ್ಲಿ ಅಧಿಕ ತನ್ನ ಮಿತ್ರ ಪಕ್ಷಗಳಿಗೆ ಅಧಿಕ ಸೀಟುಗಳನ್ನು ಬಿಟ್ಟುಕೊಟ್ಟಿದೆ ಮತ್ತು ಕೆಲವು ರಾಜ್ಯಗಳಲ್ಲಿ ಅಧಿಕ ಸೀಟುಗಳನ್ನು ಕಸಿದುಕೊಂಡಿದೆ.
ಆಂಧ್ರಪ್ರದೇಶ:
ಆಂಧ್ರಪ್ರದೇಶದಲ್ಲಿ ಇರುವ ಒಟ್ಟು ಲೋಕಸಭಾ ಕ್ಷೇತ್ರಗಳು 25. ಟಿಡಿಪಿ ಮತ್ತು ಜನಸೇನಾದೊಂದಿಗೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ 6 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದೆ. ವಿಧಾನಸಭಾ ಚುನಾವಣೆಯಲ್ಲಿ 11 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ಆಂಧ್ರದಲ್ಲಿ ಬಿಜೆಪಿ ಪಡೆದಿರುವ ಶೇಕಡಾವಾರು ಮತ 0.98, ಅಂದರೆ ಶೇಕಡಾ 1ಕ್ಕಿಂತಲೂ ಕಡಿಮೆ. 2014ರಲ್ಲಿ ಬಿಜೆಪಿ ಶೇಕಡಾ 10.46ರಷ್ಟು ಮತಗಳನ್ನು ಪಡೆದಿತ್ತು ಮತ್ತು 2 ಲೋಕಸಭಾ ಕ್ಷೇತ್ರಗಳಲ್ಲಿ ಗೆದ್ದಿತ್ತು.
ಬಿಹಾರ:
ಬಿಹಾರದಲ್ಲಿ ಎನ್ಡಿಎ ಮೈತ್ರಿಕೂಟದ ಭಾಗವಾಗಿರುವ ಚಿರಾಗ್ ಪಾಸ್ವಾನ್ ಅವರ ಲೋಕಜನಶಕ್ತಿ ಪಕ್ಷಕ್ಕೆ ಬಿಜೆಪಿ 6 ಸೀಟುಗಳನ್ನು ಬಿಟ್ಟುಕೊಟ್ಟಿದೆ.
2019ರಲ್ಲಿ ಲೋಕಜನಶಕ್ತಿ 6 ಲೋಕಸಭಾ ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು ಮತ್ತು ಶೇಕಡಾ 7.46ರಷ್ಟು ಮತಗಳನ್ನು ಪಡೆದುಕೊಂಡಿತ್ತು. 2020ರ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಲೋಕಜನಶಕ್ತಿ ಪಕ್ಷ ಶೇಕಡಾ 5.66ರಷ್ಟು ಮತಗಳನ್ನು ಪಡೆದಿತ್ತು. ಗೆದ್ದಿದ್ದು 1 ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ.
ಆದರೆ ಎಲ್ಜೆಪಿ ಬಳಿ ಇರುವ ಮತಗಳು ಬಿಹಾರದ ಚುನಾವಣಾ ಚಿತ್ರಣವನ್ನೇ ಬದಲಿಸುವಷ್ಟು ಸಮರ್ಥವಾಗಿರುವ ಹಿನ್ನೆಲೆಯಲ್ಲಿ ಎನ್ಡಿಎಯಿಂದ ಹೊರಹೋಗಲು ಸಿದ್ಧವಾಗಿದ್ದ ಚಿರಾಗ್ ಪಾಸ್ವಾನ್ ಅವರನ್ನು ಸಮಾಧಾನಪಡಿಸಿ ಅವರು ಕೇಳಿದಷ್ಟು ಸೀಟುಗಳನ್ನು ಬಿಜೆಪಿ ಬಿಟ್ಟುಕೊಟ್ಟಿದೆ.
ಉತ್ತರಪ್ರದೇಶ:
ಉತ್ತರಪ್ರದೇಶದಲ್ಲಿ ಅಪ್ನಾದಳ್ ಬಿಜೆಪಿಯ ಪ್ರಮುಖ ಪಾಲುದಾರ ಪಕ್ಷ. 2019ರ ಲೋಕಸಭಾ ಚುನಾವಣೆಯಲ್ಲಿ ಶೇಕಡಾ 1.12ರಷ್ಟು ಮತಗಳನ್ನು ಪಡೆದಿದ್ದ ಅಪ್ನಾದಳ್ 2 ಲೋಕಸಭಾ ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಒಟ್ಟು 80 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಅತ್ಯಧಿಕ ಸ್ಥಾನಗಳನ್ನು ಗೆಲ್ಲುವುದಕ್ಕೆ ಅಪ್ನಾದಳ್ ಬೆಂಬಲ ಅನಿವಾರ್ಯವಾಗಿರುವುದರಿಂದ ಅಪ್ನಾದಳವನ್ನು ಮರ್ಯಾದೆಯಿಂದ ನಡೆಸಿಕೊಂಡಿದೆ ಬಿಜೆಪಿ.
ಕರ್ನಾಟಕ:
ಕರ್ನಾಟಕದಲ್ಲಿರುವ ಒಟ್ಟು ಲೋಕಸಭಾ ಕ್ಷೇತ್ರಗಳು 28. 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮೈತ್ರಿಯಲ್ಲಿ ಜೆಡಿಎಸ್ 7 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಹಾಸನ, ಮಂಡ್ಯ, ತುಮಕೂರು, ಶಿವಮೊಗ್ಗ, ಉಡುಪಿ-ಚಿಕ್ಕಮಗಳೂರು, ವಿಜಯಪುರ ಮತ್ತು ಉತ್ತರ ಕನ್ನಡ. ಆ ಚುನಾವಣೆಯಲ್ಲಿ ಜೆಡಿಎಸ್ ಗೆದ್ದಿದ್ದು 1 ಕ್ಷೇತ್ರವಾದ್ರೂ ಶೇಕಡಾ 9.74ರಷ್ಟು ಮತಗಳನ್ನು ಪಡೆದುಕೊಂಡಿತ್ತು.
2014ರಲ್ಲಿ ಸ್ವತಂತ್ರವಾಗಿಯೇ ಸ್ಪರ್ಧೆ ಮಾಡಿದ್ದ ಜೆಡಿಎಸ್ ಹಾಸನ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರವನ್ನು ಗೆದ್ದುಕೊಂಡಿತ್ತು ಮತ್ತು ಶೇಕಡಾ 11ರಷ್ಟು ಮತಗಳನ್ನು ಪಡೆದಿತ್ತು. 2009ರಲ್ಲಿ ಎಲ್ಲ 28 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದ ಜೆಡಿಎಸ್ 3 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು ಮತ್ತು ಶೇಕಡಾ 13.57ರಷ್ಟು ಮತಗಳನ್ನು ಪಡೆದಿತ್ತು. 2004ರಲ್ಲಿ ಜೆಡಿಎಸ್ 3 ಲೋಕಸಭಾ ಕ್ಷೇತ್ರವನ್ನು ಗೆದ್ದುಕೊಂಡಿತ್ತು.
ಇನ್ನು ವಿಧಾನಸಭಾ ಚುನಾವಣೆಯ ಲೆಕ್ಕಾಚಾರಕ್ಕೆ ಬಂದ್ರೆ 2008ರಲ್ಲಿ ಜೆಡಿಎಸ್ 28 ಸ್ಥಾನ ಮತ್ತು ಶೇಕಡಾ 18.96ರಷ್ಟು ಮತಗಳನ್ನು, 2013ರಲ್ಲಿ 40 ಸ್ಥಾನಗಳನ್ನು ಮತ್ತು ಶೇಕಡಾ 20ರಷ್ಟು ಮತಗಳನ್ನು, 2018ರಲ್ಲಿ 37 ಸ್ಥಾನಗಳನ್ನು ಮತ್ತು ಶೇಕಡಾ 18ರಷ್ಟು ಮತಗಳನ್ನು ಹಾಗೂ 2023ರ ಚುನಾವಣೆಯಲ್ಲಿ 19 ಕ್ಷೇತ್ರಗಳನ್ನು ಗೆದ್ದು ಶೇಕಡಾ 13.29ರಷ್ಟು ಮತಗಳನ್ನು ಪಡೆದಿತ್ತು.
ಹೊಂದಾಣಿಕೆ ಅಥವಾ ಮೈತ್ರಿ ವೇಳೆ ಜೆಡಿಎಸ್ನ ಶೇಕಡಾವಾರು ಮತ ಅತ್ಯಂತ ಮಹತ್ವದ್ದು. ಈ ಮತ ಪ್ರಮಾಣ ಚುನಾವಣಾ ಫಲಿತಾಂಶದ ಲೆಕ್ಕಾಚಾರವನ್ನೇ ಬದಲಿಸಿಬಿಡುತ್ತದೆ.
ಕರ್ನಾಟಕದಲ್ಲಿ ಕಾಂಗ್ರೆಸ್ಸನ್ನು ಮುಗಿಸಿಬಿಡಬೇಕೇಂಬ ಉಮೇದಿನಲ್ಲಿರುವ ಕುಮಾರಸ್ವಾಮಿಯವರು ಮೊದಲಿಗೆ ಬಿಜೆಪಿ ಹೊಂದಾಣಿಕೆಯನ್ನು ಹಳೆ ಮೈಸೂರು ಭಾಗದಲ್ಲಿ ಪಕ್ಷ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕೆ ಬಳಸಿಕೊಳ್ಳಬೇಕಿತ್ತು.
ಆದರೆ ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಲೋಕಸಭಾ ಕ್ಷೇತ್ರವನ್ನೇ ಬಿಜೆಪಿಗೆ ಬಿಟ್ಟುಕೊಡುವ ಮೂಲಕ ಕುಮಾರಸ್ವಾಮಿ ರಾಜಕೀಯ ಪ್ರಮಾದವೊಂದನ್ನು ಮಾಡಿದ್ದಾರೆ.
ಹಾಸನ ಮತ್ತು ಮಂಡ್ಯ ಸೀಟಿಗಾಗಿ ಅಥವಾ ಹೆಚ್ಚುವರಿ ಕೋಲಾರ ಸೀಟಿಗಾಗಿ ಬಿಜೆಪಿ ಪಾದದ ಕೆಳಗೆ ಜೆಡಿಎಸ್ನ್ನು ಅಡ ಇಡುವ ಸ್ಥಿತಿಯನ್ನು ಕುಮಾರಸ್ವಾಮಿಯವರು ತಂದುಕೊಂಡಿದ್ದು ಜೆಡಿಎಸ್ನ ಅಧೋಗತಿಯ ಮತ್ತೊಂದು ಸುಳಿವಷ್ಟೇ.