ಕಾಂಗ್ರೆಸ್ ನಾಯಕ ಮತ್ತು ವಯನಾಡು ಲೋಕಸಭಾ ಕ್ಷೇತ್ರದ ಸಂಸದ ರಾಹುಲ್ ಗಾಂಧಿ ಅವರನ್ನು ನ್ಯಾಷನಲ್ ಹೆರಾಲ್ಡ್ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ ಸತತ ಮೂರನೇ ದಿನವೂ ಅಂದರೆ ಇವತ್ತೂ ವಿಚಾರಣೆಗೆ ಕರೆದಿದೆ. ಮೊನ್ನೆ ಮತ್ತು ನಿನ್ನೆ ಒಟ್ಟು 19 ಗಂಟೆ ರಾಹುಲ್ ಅವರನ್ನು ಇಡಿ ವಿಚಾರಣೆ ನಡೆಸಿದೆ.
ಹಾಗಾದರೆ 2004ರಿಂದ ಸಂಸದರಾಗಿರುವ ರಾಹುಲ್ ಗಾಂಧಿ ಅವರ ಬಳಿ ಎಷ್ಟು ಆಸ್ತಿ ಇದೆ..? 2019ರ ಲೋಕಸಭಾ ಚುನಾವಣೆ ವೇಳೆ ಅವರು ಕೊಟ್ಟಿರುವ ಸಂಪತ್ತಿನ ಲೆಕ್ಕಾಚಾರ ಇಲ್ಲಿದೆ.
ರಾಹುಲ್ ಗಾಂಧಿ ಅವರ ಬಳಿ ಇರುವ ಆಸ್ತಿಯ ಒಟ್ಟು ಮೌಲ್ಯ 15 ಕೋಟಿ 88 ಲಕ್ಷ ರೂಪಾಯಿ. ಇವರ ಮೇಲಿರುವ ಋಣಭಾರ 72 ಲಕ್ಷ ರೂಪಾಯಿ.
ರಾಹುಲ್ ಗಾಂಧಿ 1995ರಲ್ಲಿ ಅಮೆರಿಕದಲ್ಲಿರುವ ಕ್ಯಾಂಬ್ರಿಡ್ಜ್ ನಲ್ಲಿರುವ ಟ್ರಿನಿಟಿ ಕಾಲೇಜಿನಲ್ಲಿ ಅಭಿವೃಧಿ ಅಧ್ಯಯನ ವಿಷಯದಲ್ಲಿ ಎಂಫಿಲ್ ಮಾಡಿದ್ದಾರೆ.
2013ರ ಆರ್ಥಿಕ ವರ್ಷದಲ್ಲಿ ಇವರ ಆದಾಯ 1 ಕೋಟಿ 3 ಲಕ್ಷ ರೂಪಾಯಿ. 2014ರ ಆರ್ಥಿಕ ವರ್ಷದಲ್ಲಿ 95 ಲಕ್ಷದ 32 ಸಾವಿರ ರೂಪಾಯಿ, 2015ರಲ್ಲಿ 86 ಲಕ್ಷದ 55 ಸಾವಿರ ರೂಪಾಯಿ, 2016ರಲ್ಲಿ 1 ಕೋಟಿ 7 ಲಕ್ಷ ರೂಪಾಯಿ, 2017ರಲ್ಲಿ 1 ಕೋಟಿ 11 ಲಕ್ಷ ರೂಪಾಯಿ ಆದಾಯ ಹೊಂದಿದ್ದರು.
ರಾಹುಲ್ ಗಾಂಧಿ ಎಸ್ಬಿಐ ಮತ್ತು ಹೆಚ್ಡಿಎಫ್ಸಿಯಲ್ಲಿರುವ ಇಟ್ಟಿರುವ ಉಳಿತಾಯ ಠೇವಣಿ ಮೊತ್ತ 17 ಲಕ್ಷದ 93 ಸಾವಿರ ರೂಪಾಯಿ. ತಾವೇ ನಿರ್ದೇಶಕರಾಗಿರುವ ಯಂಗ್ ಇಂಡಿಯಾದಲ್ಲಿ (ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಯಂಗ್ ಇಂಡಿಯಾ ಖರೀದಿಸಿದ್ದೇ ಈಗ ಹಗರಣದ ಮೂಲ ಎನ್ನುವ ಆರೋಪ) 1 ಲಕ್ಷದ 90 ಸಾವಿರ ರೂಪಾಯಿ ಮೊತ್ತದ ಷೇರು ಒಳಗೊಂಡಂತೆ ಬಾಂಡ್, ಷೇರು ಮತ್ತು ಈಕ್ವಿಟಿಗಳಲ್ಲಿ 5 ಕೋಟಿ 19 ಲಕ್ಷದ 44 ಸಾವಿರ ರೂಪಾಯಿ ಮೊತ್ತದ ಹೂಡಿಕೆ ಮಾಡಿದ್ದಾರೆ.
ಸಾರ್ವಜನಿಕ ಪಿಂಚಣಿ ನಿಧಿ ಯೋಜನೆ ಮೂಲಕ 39 ಲಕ್ಷದ 89 ಸಾವಿರ ರೂಪಾಯಿ ಹೂಡಿಕೆ ಮಾಡಿದ್ದಾರೆ.
ರಾಹುಲ್ ಗಾಂಧಿ ಬಳಿ 333 ಗ್ರಾಂನಷ್ಟು ಚಿನ್ನ ಅಂದರೆ 15 ಲಕ್ಷ ರೂಪಾಯಿ ಮೊತ್ತದ ಆಭರಣ ಇದೆ. ಅಂದರೆ ಒಟ್ಟು 5 ಕೋಟಿ 80 ಲಕ್ಷ ರೂಪಾಯಿ ಮೊತ್ತದ ಚರಾಸ್ತಿ ಇದೆ.
ದೆಹಲಿಯ ಸುಲ್ತಾನ್ಪುರದ ಹಳ್ಳಿಯಲ್ಲಿ 1 ಕೋಟಿ ರೂಪಾಯಿ ಮೌಲ್ಯದ ಕೃಷಿಭೂಮಿ, ದೆಹಲಿಯಲ್ಲಿ 8 ಕೋಟಿ 75 ಲಕ್ಷ ರೂಪಾಯಿ ಮೊತ್ತದ ವಾಣಿಜ್ಯ ಕಟ್ಟಡ ಒಳಗೊಂಡು ಒಟ್ಟು 10 ಕೋಟಿ 8 ಲಕ್ಷ ರೂಪಾಯಿ ಮೊತ್ತದ ಸ್ಥಿರಾಸ್ತಿ ಹೊಂದಿದ್ದಾರೆ.
ತಾಯಿ ಸೋನಿಯಾಗಾಂಧಿ ಅವರಿಂದ 5 ಲಕ್ಷ ರೂಪಾಯಿ ಸಾಲ ಪಡೆದಿರುವ ರಾಹುಲ್ ಗಾಂಧಿ ತಮ್ಮ ಬಾಡಿಗೆದಾರರಿಂದ 67 ಲಕ್ಷ ರೂಪಾಯಿ ಮೊತ್ತವನ್ನು ಮುಂಗಡ ಹಣವಾಗಿ (ಅಡ್ವಾನ್ಸ್) ರೂಪದಲ್ಲಿ ಪಡೆದಿದ್ದಾರೆ. ಈ ಮೂಲಕ ಇವರ ಮೇಲಿರುವ ಋಣಭಾರ ಒಟ್ಟು 72 ಲಕ್ಷ ರೂಪಾಯಿ.