ಇಂಡಿಗೋ ಏರ್ಲೈನ್ಸ್ ಹುಬ್ಬಳ್ಳಿ ಮತ್ತು ಹೈದರಾಬಾದ್ ನಡುವೆ ನೇರ ವಿಮಾನಯಾನದ ಕಾರ್ಯಾಚರಣೆಯನ್ನು ಬುಧವಾರದಿಂದ ಆರಂಭಿಸಿದೆ.
ಕೊರೋನಾ ಪೂರ್ವದಲ್ಲಿ ಸ್ಪೈಸ್ಜೆಟ್ ಹಾಗೂ ಅಲಯನ್ಸ್ ಏರ್ ಸಂಸ್ಥೆಗಳು ಈ ಎರಡು ನಗರಗಳ ನಡುವೆ ವಿಮಾನಯಾನ ಸೇವೆ ನೀಡುತ್ತಿದ್ದವು. ಆದರೆ, ಕೊರೋನಾ ನಂತರ ಅಲಯನ್ಸ್ ಏರ್ ಸೇವೆಯನ್ನು ಮರು ಆರಂಭಿಸಿರಲಿಲ್ಲ. ಇದೀಗ, ಇಂಡಿಗೋ ಏರ್ಲೈನ್ಸ್ ಈ ನಗರಗಳ ನಡುವೆ ವಿಮಾನಯಾನ ಸೇವೆಯನ್ನು ಆರಂಭಿಸಿದೆ.
ಮೊದಲ ದಿನ ಹುಬ್ಬಳ್ಳಿಯಿಂದ 40 ಪ್ರಯಾಣಿಕರು ಹೈದರಾಬಾದ್ಗೆ ತೆರಳಿದ್ದು, 44 ಪ್ರಯಾಣಿಕರು ಹೈದರಾಬಾದ್ನಿಂದ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಪ್ರತಿದಿನ ಬೆಳಗ್ಗೆ 8 ಗಂಟೆಗೆ ಹುಬ್ಬಳ್ಳಿಯಿಂದ ವಿಮಾನ ಹೊರಡುತ್ತಿದ್ದು, ಬೆಳಿಗ್ಗೆ 9:10ಕ್ಕೆ ಹೈದರಾಬಾದ್ ತಲುಪುತ್ತದೆ. ಪ್ರತಿಯಾಗಿ, ವಿಮಾನವು ಹೈದರಾಬಾದ್ನಿಂದ ಬೆಳಿಗ್ಗೆ 9:40 ಕ್ಕೆ ಹೊರಟು 11 ಗಂಟೆಗೆ ಹುಬ್ಬಳ್ಳಿಯಲ್ಲಿ ಇಳಿಯುತ್ತದೆ.
ಇಂಡಿಗೋ ಮೇ ಮೊದಲ ವಾರದಿಂದ ಮಂಗಳೂರು ಮತ್ತು ಮೈಸೂರಿಗೆ ನೇರ ವಿಮಾನಯಾನ ಆರಂಭಿಸುವುದಾಗಿ ಹೇಳಿದೆ. ಇದು ಮಂಗಳೂರಿಗೆ ವಾರದಲ್ಲಿ ನಾಲ್ಕು ದಿನ ಮತ್ತು ಮೈಸೂರಿಗೆ ಮೂರು ದಿನ ಕಾರ್ಯನಿರ್ವಹಿಸಲಿದೆ. ವೇಳಾಪಟ್ಟಿಯ ಪ್ರಕಾರ, ವಿಮಾನವು ಭಾನುವಾರ, ಸೋಮವಾರ, ಬುಧವಾರ ಮತ್ತು ಶುಕ್ರವಾರ ಸಂಜೆ 5:15 ಕ್ಕೆ ಹುಬ್ಬಳ್ಳಿಯಿಂದ ಹೊರಟು 6:15 ಕ್ಕೆ ಮಂಗಳೂರಿಗೆ ಇಳಿಯುತ್ತದೆ. ಪ್ರತಿಯಾಗಿ ಮಂಗಳೂರಿನಿಂದ ಸಂಜೆ 6:35ಕ್ಕೆ ಹೊರಟು ರಾತ್ರಿ 7:40ಕ್ಕೆ ಹುಬ್ಬಳ್ಳಿಗೆ ಇಳಿಯುತ್ತದೆ.
ಮಂಗಳವಾರ, ಗುರುವಾರ ಮತ್ತು ಶನಿವಾರ ವಿಮಾನವು ಹುಬ್ಬಳ್ಳಿಯಿಂದ ಮೈಸೂರಿಗೆ ಸಂಜೆ 4:55 ಕ್ಕೆ ಹೊರಟು ಸಂಜೆ 6:05 ಕ್ಕೆ ಮೈಸೂರಿಗೆ ಇಳಿಯುತ್ತದೆ. ಪ್ರತಿಯಾಗಿ ಮೈಸೂರಿನಿಂದ ಸಂಜೆ 6:25ಕ್ಕೆ ಹೊರಟು ರಾತ್ರಿ 7:40ಕ್ಕೆ ಹುಬ್ಬಳ್ಳಿಗೆ ಇಳಿಯುತ್ತದೆ.