ಛತ್ತೀಸ್ಘಡದಲ್ಲಿ ಸರ್ಕಾರಿ ಅಧಿಕಾರಿಯೊಬ್ಬರು ಅಂಧಾ ದರ್ಬಾರ್ ನಡೆಸಿದ್ದಾರೆ. ತಮ್ಮ ಮೊಬೈಲ್ ನೀರಲ್ಲಿ ಬಿತ್ತು ಎಂಬ ಕಾರಣಕ್ಕೆ ಖೆರ್ಖಟ್ಟಾ ಜಲಾಶಯದಲ್ಲಿದ್ದ 21 ಲಕ್ಷ ಲೀಟರ್ ನೀರನ್ನು ಖಾಲಿ ಮಾಡಿಸಿದ್ದಾರೆ. ಎರಡು ದೊಡ್ಡ ಮೋಟಾರ್ ಪಂಪ್ಗಳನ್ನು ಬಳಸಿ ನಿರಂತರವಾಗಿ ಮೂರು ದಿನಗಳ ಕಾಲ ನಿರಂತರವಾಗಿ ನೀರನ್ನು ಹೊರಹಾಕಿಸಿದ್ದಾರೆ.
ಕಂಕೇರ್ ಜಿಲ್ಲೆಯ ಆಹಾರ ಇಲಾಖೆ ಅಧಿಕಾರಿ ರಾಜೇಶ್ ವಿಶ್ವಾಸ್ ಇತ್ತೀಚಿಗೆ ತಮ್ಮ ಗೆಳೆಯರ ಜೊತೆಗೂಡಿ ಇಲ್ಲಿನ ಖೆರ್ಖಟ್ಟಾ ಜಲಾಶಯಕ್ಕೆ ಪ್ರವಾಸ ಹೋಗಿದ್ದರು. ಈ ಸಂದರ್ಭದಲ್ಲಿ ಸೆಲ್ಫಿ ತೆಗೆದುಕೊಳ್ಳುವ ಆಕಸ್ಮಿಕವಾಗಿ ಮೊಬೈಲ್ ಜಲಾಶಯಕ್ಕೆ ಬಿದ್ದಿದೆ.
ಒಂದು ಲಕ್ಷಕ್ಕೂ ಹೆಚ್ಚು ಮೌಲ್ಯದ ಮೊಬೈಲ್ ಅದಾಗಿದ್ದ ಕಾರಣ.. ಜೊತೆಗೆ ಇಲಾಖೆಗೆ ಸಂಬಂಧಿಸಿದ ಮಹತ್ವದ ದಾಖಲೆಗಳು ಮೊಬೈಲ್ನಲ್ಲಿ ಅಡಕವಾಗಿದ್ದ ಕಾರಣ ರಾಜೇಶ್ ವಿಶ್ವಾಸ್ ಸ್ಥಳೀಯ ಈಜುಗಾರರನ್ನು ಬಳಸಿಕೊಂಡು ಹುಡುಕಾಟ ನಡೆಸಿದ್ದರು. ಆದರೆ, ಯಾವುದೇ ಪ್ರಯೋಜನ ಆಗಲಿಲ್ಲ.
ಕೊನೆಗೆ ಈ ವಿಷಯವನ್ನು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದ ರಾಜೇಶ್ ವಿಶ್ವಾಸ್, ಎರಡು ಮೋಟಾರ್ಗಳನ್ನು ಬಳಸಿಕೊಂಡು ನೀರನ್ನು ಖಾಲಿ ಮಾಡಿಸತೊಡಗಿದರು. ಸೋಮವಾರ ಸಂಜೆಯಿಂದ ಗುರುವಾರದವರೆಗೂ ನಿರಂತರವಾಗಿ 21 ಲಕ್ಷ ಲೀಟರ್ ನೀರನ್ನು ಜಲಾಶಯದಿಂದ ಖಾಲಿ ಮಾಡಿಸಿದರು.
ಕೊನೆಗೆ ನೀರಲ್ಲಿ ಬಿದ್ದಿದ್ದ ಮೊಬೈಲ್ ಏನೋ ಸಿಕ್ಕಿತು. ಆದರೆ, ಕೆಲಸಕ್ಕೆ ಮಾತ್ರ ಬರುತ್ತಿರಲಿಲ್ಲ. ಇತ್ತ ರಾಜೇಶ್ ವಿಶ್ವಾಸ್ ಮಾಡಿದ ಕೆಲಸ ತೀವ್ರ ಟೀಕೆಗೆ ಗುರಿಯಾಯಿತು. ಸಾರ್ವಜನಿಕವಾಗಿ ಭಾರೀ ಆಕ್ರೋಶ ವ್ಯಕ್ತವಾಯಿತು.
ಈ ಬೆನ್ನಲ್ಲೆ ಎಚ್ಚೆತ್ತುಕೊಂಡ ಜಿಲ್ಲಾಧಿಕಾರಿಗಳು, ಅಧಿಕಾರ ದುರ್ಬಳಕೆ ಆರೋಪದ ಮೇಲೆ ರಾಜೇಶ್ ವಿಶ್ವಾಸ್ರನ್ನು ಸೇವೆಯಿಂದ ಅಮಾನತು ಮಾಡಿದೆ. ಉನ್ನತಮಟ್ಟದ ತನಿಖೆ ಮಾಡಿಸುವುದಾಗಿ ಮಂತ್ರಿ ಅಮರ್ಜಿತ್ ಭಗತ್ ಪ್ರಕಟಿಸಿದ್ದಾರೆ.
ಜಲಸಂಪನ್ಮೂಲ ಇಲಾಖೆ ಈಗ ಎಚ್ಚೆತ್ತಂತೆ ವರ್ತಿಸಿದೆ. ಸ್ವಲ್ಪ ನೀರು ಖಾಲಿ ಮಾಡಬಹುದು ಎಂತಿ ತಿಳಿಸಿದ್ದೆವು. ಅವರು ಇಷ್ಟು ನೀರು ಖಾಲಿ ಮಾಡಿಸುತ್ತಾರೆ ಎನ್ನುವುದು ಗೊತ್ತಿರಲಿಲ್ಲ ಎಂದು ಅಧಿಕಾರಿಗಳು ವಿವರಣೆ ನೀಡಿದ್ದಾರೆ.
ADVERTISEMENT
ADVERTISEMENT