ನಿಯಮಗಳನ್ನು ಉಲ್ಲಂಘಿಸಿ ಮತ್ತು ಪೂರ್ವಾನುಮತಿ ಪಡೆಯದೇ ಕಟ್ಟಲಾಗಿರುವ ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಅಂತಹ ಅಕ್ರಮ ಕಟ್ಟಡಗಳಿಗೆ ಕಟ್ಟಡ ನಿರ್ಮಾಣ ಪೂರ್ಣಗೊಂಡಿದೆ ಮತ್ತು ಆ ಕಟ್ಟಡಗಳನ್ನು ಬಳಸಬಹುದು ಎಂದು ಪ್ರಮಾಣಪತ್ರ ನೀಡುವ ಅಧಿಕಾರಿಗಳೂ ಇಲಾಖಾ ತನಿಖೆಯನ್ನು ಎದುರಿಸಲೇಬೇಕು ಎಂದು ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿದೆ.
ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್ ಮಹದೇವನ್ ಅವರಿದ್ದ ಪೀಠ ʻಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸುವಂತೆʼ ಅಲಬಾಹಾದ್ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದೆ.
ಉತ್ತರಪ್ರದೇಶ ವಸತಿ ಮತ್ತು ಅಭಿವೃದ್ಧಿ ನಿಗಮ ಮಂಜೂರು ಮಾಡಿದ್ದ ಭೂಮಿಯಲ್ಲಿ ಅಗತ್ಯ ಪೂರ್ವಾನುಮತಿಗಳನ್ನು ಪಡೆಯದೇ ಅಂಗಡಿ ಮತ್ತು ವಾಣಿಜ್ಯ ಸಂಕೀರ್ಣಗಳನ್ನು ಕಟ್ಟಲಾಗಿತ್ತು. ಆ ಅಂಗಡಿ ಮತ್ತು ವಾಣಿಜ್ಯ ಸಂಕೀರ್ಣಗಳನ್ನು ಅರ್ಜಿದಾರರು ಖರೀದಿ ಮಾಡಿದ್ದರು.
ಈ ಅಂಗಡಿ ಮತ್ತು ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಿ ದೀರ್ಘಕಾಲವಾಗಿದೆ ಮತ್ತು ಅರ್ಜಿದಾರರಿಗೆ ಅಧಿಕಾರಿಗಳು ನೋಟಿಸ್ ನೀಡಿಯೇ ಇರಲಿಲ್ಲ ಎಂಬ ಆಧಾರದಲ್ಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.
ಅಂತಹ ಅಕ್ರಮ ಕಟ್ಟಡಗಳಲ್ಲಿ ದೀರ್ಘಕಾಲದಿಂದ ಇದ್ದೇವೆ, ಹೂಡಿಕೆಯನ್ನು ಮಾಡಿದ್ದೇವೆ ಮತ್ತು ಅಧಿಕಾರಿಗಳೇ ಕರ್ತವ್ಯ ಲೋಪ ಎಸಗಿದ್ದಾರೆ ಎಂಬ ಆಧಾರದಲ್ಲಿ ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸಲಾಗದು
ಎಂದು ಸುಪ್ರೀಂಕೋರ್ಟ್ ಹೇಳಿದೆ.
ʻಒಂದು ವೇಳೆ ಕಾಯ್ದೆ/ಕಾನೂನುಗಳಿಗೆ ವಿರುದ್ಧವಾಗಿ ಕಟ್ಟಡ ನಿರ್ಮಾಣ ಮಾಡಿದ್ದರೆ, ಅದನ್ನು ಅಕ್ರಮ ಮತ್ತು ಕಾನೂನುಬಾಹಿರ ನಿರ್ಮಾಣ ಎಂದೇ ಪರಿಗಣಿಸಲಾಗುತ್ತದೆ, ಅದನ್ನು ಅನಿವಾರ್ಯವಾಗಿ ನೆಲಸಮ ಮಾಡಬೇಕಾಗುತ್ತದೆ. ಕಾಲ ಸವೆದಿದೆ ಅಥವಾ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದ್ದಾರೆ ಅಥವಾ ಆ ಕಟ್ಟಡ ನಿರ್ಮಾಣದಲ್ಲಿ ಅಪಾರ ಹಣವನ್ನು ವ್ಯಯ ಮಾಡಲಾಗಿದೆ ಎಂಬ ನೆಪದಲ್ಲಿ ಅಂತಹ ಕಟ್ಟಡವನ್ನು ಕಾನೂನುಬದ್ಧಗೊಳಿಸಲಾಗಲೀ ಅಥವಾ ಸಂರಕ್ಷಣೆ ಮಾಡಲಾಗಲೀ ಸಾಧ್ಯವಿಲ್ಲʼ
ಎಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.
ADVERTISEMENT
ADVERTISEMENT