ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಸಚಿವ ಸತ್ಯೇಂದ್ರ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಸೋಮವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ.
ಜೈನ್ ನಿವಾಸಕ್ಕೆ ತೆರಳಿರುವ ಅಧಿಕಾರಿಗಳು, ಕೊಲ್ಕತ್ತ ಮೂಲದ ಕಂಪನಿಯೊಂದರ ಹವಾಲ ವಹಿವಾಟು ಪ್ರಕರಣಕ್ಕೆ ಸಂಬಂಧಿಸಿ ಶೋಧ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಜೈನ್ ಅವರನ್ನು ಕಳೆದ ವಾರ ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಬಳಿಕ ದೆಹಲಿ ನ್ಯಾಯಾಲಯ ಅವರನ್ನು ಜೂನ್ 9ರ ವರೆಗೆ ಜಾರಿ ನಿರ್ದೇಶನಾಲಯದ ವಶಕ್ಕೆ ಒಪ್ಪಿಸಿ ಆದೇಶ ನೀಡಿತ್ತು. ಜೈನ್ ಬಂಧನ ರಾಜಕೀಯ ಆಯಾಮ ಪಡೆದುಕೊಂಡಿತ್ತು.
ಎಂಟು ವರ್ಷ ಹಳೆಯ ‘ಹುಸಿ’ ಪ್ರಕರಣದಲ್ಲಿ ಸತ್ಯೇಂದ್ರ ಜೈನ್ ಅವರನ್ನು ಬಂಧಿಸಲಾಗಿದೆ. ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಎಎಪಿ ಉಸ್ತುವಾರಿಯಾಗಿ ಸತ್ಯೇಂದ್ರ ಅವರು ಇದ್ದಾರೆ. ಅಲ್ಲಿ ಚುನಾವಣೆ ಸೋಲುವ ಭೀತಿಯಲ್ಲಿರುವ ಬಿಜೆಪಿ, ಹೀಗೆ ಮಾಡಿದೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಟೀಕಿಸಿದ್ದರು.
ಜೈನ್ ಮತ್ತು ಅವರ ಕುಟುಂಬದ ಒಡೆತನದ ಕಂಪನಿಗಳಿಗೆ ಸೇರಿದ 4.81 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಇ.ಡಿ. ಇತ್ತೀಚೆಗೆ ಹೇಳಿತ್ತು.