ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ವಿಮಾನ ಇಂಧನ (ಜೆಟ್ ಇಂಧನ) ದರವನ್ನು ಭಾನುವಾರ ಶೇ 3.22 ರಷ್ಟು ಹೆಚ್ಚಿಸಿವೆ. ವಿಮಾನ ಇಂಧನ ದರವು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆ ಆಗಿದೆ.
ದೆಹಲಿಯಲ್ಲಿ ವಿಮಾನ ಇಂಧನ ದರವು ಪ್ರತಿ ಕಿಲೋ ಲೀಟರಿಗೆ 3,649.13 ರೂ. ರಷ್ಟು ಹೆಚ್ಚಾಗಿದ್ದು, 1.16 ಲಕ್ಷ ರೂ.ಗೆ ಏರಿಕೆ ಆಗಿದೆ. ಮುಂಬೈನಲ್ಲಿ ವಿಮಾನ ಇಂಧನ ದರ ಪ್ರತಿ ಕಿಲೋ ಲೀಟರಿಗೆ 1.15 ಲಕ್ಷ ರೂ.ಗೆ ತಲುಪಿದೆ. (ಒಂದು ಕಿಲೋ ಲೀಟರ್ ಎಂದರೆ ಒಂದು ಸಾವಿರ ಲೀಟರ್).
ಸ್ಥಳೀಯ ತೆರಿಗೆಗೆ ಅನುಗುಣವಾಗಿ ರಾಜ್ಯದಿಂದ ರಾಜ್ಯಕ್ಕೆ ದರದಲ್ಲಿ ವ್ಯತ್ಯಾಸ ಆಗುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ದರ ಏರಿಕೆಗೆ ಅನುಗುಣವಾಗಿ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಈ ಪರಿಷ್ಕರಣೆ ಮಾಡಿವೆ.
ಈ ವರ್ಷದ ಮಾರ್ಚ್ನಲ್ಲಿ ಪ್ರತಿ ಕಿಲೊ ಲೀಟರ್ಗೆ 17,136 ರೂ, ಏಪ್ರೀಲ್ 1 ರಂದು 2,258 ರೂ, ಏಪ್ರೀಲ್ 16 ರಂದು 277 ರೂ ಹಾಗೂ ಮೇ 1 ರಂದು 3,649 ರೂ. ನಂತೆ ವಿಮಾನ ಇಂಧನ ದರ ಹೆಚ್ಚಳ ಮಾಡಲಾಗಿದೆ.
ಜನವರಿ 1 ರಿಂದ ಏಪ್ರಿಲ್ 1 ರವರೆಗೆ ಒಟ್ಟಾರೆ ಒಂಬತ್ತು ಬಾರಿ ದರ ಹೆಚ್ಚಳ ಮಾಡಲಾಗಿದೆ. ಇದರಿಂದ ಪ್ರತಿ ಕಿ.ಲೀಟರ್ ಬೆಲೆಯು 42,829 ರೂ. ಗಳಷ್ಟು ಏರಿಕೆ ಆಗಿದೆ.