ಬೆಲೆ ಏರಿಕೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ತಕ್ಷಣದಿಂದಲೇ ಜಾರಿಗೆ ಬರುವಂತೆ ಗೋಧಿ ರಫ್ತು ನಿಷೇಧ ಮಾಡಿ ಆದೇಶ ಹೊರಡಿಸಿದೆ.
ರಫ್ತು ನಿಷೇಧ ಆದೇಶಕ್ಕೂ ಮುಂಚೆ ಹಣ ಪಾವತಿಯಾಗಿದ್ದರೆ ಮಾತ್ರ ಗೋಧಿಯನ್ನು ರಫ್ತು ಮಾಡಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.
ದೇಶದ ಒಟ್ಟಾರೆ ಆಹಾರ ಭದ್ರತೆಯನ್ನು ನಿರ್ವಹಿಸಲು ಮತ್ತು ನೆರೆಯ ಹಾಗೂ ಇತರ ದುರ್ಬಲ ರಾಷ್ಟ್ರಗಳ ಅಗತ್ಯಗಳನ್ನು ಬೆಂಬಲಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಹೇಳಲಾಗಿದೆ.
ಭಾರತ ಗೋಧಿ ಉತ್ಪಾದನೆಯಲ್ಲಿ ವಿಶ್ವದ ಎರಡನೇ ಅತಿ ದೊಡ್ಡ ರಾಷ್ಟ್ರವಾಗಿದೆ. ಉಕ್ರೇನ್ ಮೇಲೆ ಫೆಬ್ರುವರಿಯಲ್ಲಿ ರಷ್ಯಾ ಅತಿಕ್ರಮಣ ಆರಂಭಿಸಿದ ಬಳಿಕ ಕಪ್ಪು ಸಮುದ್ರ ಮಾರ್ಗವಾಗಿ ಗೋಧಿ ಪೂರೈಕೆ ಕಡಿಮೆಯಾದ ಬೆನ್ನಲ್ಲೇ, ಜಾಗತಿಕ ಖರೀದಿದಾರರು ಭಾರತದತ್ತ ಮುಗಿಬಿದ್ದಿದ್ದರು.
ಮಾರ್ಚ್ ತಿಂಗಳಲ್ಲಿ ಗೋಧಿ ಬೆಳೆಯಲ್ಲಿ ನಷ್ಟವುಂಟಾಗಿದೆ. ಅಲ್ಲದೇ, ಏಪ್ರಿಲ್ ನಲ್ಲಿ ಶೇ.7.79 ಕ್ಕೆ ಏರಿದ ಚಿಲ್ಲರೆ ಹಣದುಬ್ಬರವನ್ನು ನಿಯಂತ್ರಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ.
ಸತತ ಐದು ವರ್ಷಗಳ ದಾಖಲೆಯ ಸುಗ್ಗಿಯ ನಂತರ, ಈ ವರ್ಷ ಭಾರತವು ತನ್ನ ಗೋಧಿ ಉತ್ಪಾದನೆಯಲ್ಲಿ 113.5 ಮಿಲಿಯನ್ ಟನ್ ಗಳಿಂದ 105 ಮಿಲಿಯನ್ ಟನ್ ಗಳಿಗೆ ಇಳಿಕೆ ಕಂಡಿದೆ. ಪ್ರತ್ಯೇಕ ಅಧಿಸೂಚನೆಯಲ್ಲಿ, ಈರುಳ್ಳಿ ಬೀಜಗಳ ರಫ್ತು ಷರತ್ತುಗಳನ್ನು ಸಡಿಲಿಸುವುದಾಗಿ DGFT ಘೋಷಿಸಿದೆ.