ಭಾರತ ಸರ್ಕಾರ ಗೋಧಿ ರಫ್ತಿಗೆ ಈ ಹಿಂದೆ ನಿಷೇಧ ಹೇರಿದ ಬಳಿಕ ಇದೀಗ ಮೈದಾ, ರವೆ ಸೇರಿದಂತೆ ಹಿಟ್ಟಿನ ರಫ್ತಿಗೆ ನಿಷೇಧ ಹೇರಿದೆ.
ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ (ಡಿಜಿಎಫ್ಟಿ)ಯ ಅಧಿಸೂಚನೆಯ ಪ್ರಕಾರ, ಈ ನಿರ್ಧಾರವು ಜುಲೈ 12 ರಿಂದ ಜಾರಿಗೆ ಬರಲಿದೆ. ಗೋಧಿ ಮತ್ತು ಗೋಧಿ ಹಿಟ್ಟಿನ ರಫ್ತಿನ ಕುರಿತಾಗಿ ಜುಲೈ 6 ರಂದು ಹೊರಡಿಸಲಾದ ಅಧಿಸೂಚನೆಯ ಪ್ರಕಾರ ಈಗಾಗಲೇ ರಫ್ತಿಗೆ ಸಿದ್ಧಗೊಂಡಿರುವ ಹಿಟ್ಟಿಗೆ ಸಚಿವಾಲಯದ ಸಮಿತಿಯಿಂದ ಪೂರ್ವಾನುಮತಿ ಪಡೆಯಬಹುದಾಗಿದೆ. ಆದರೆ ಜುಲೈ 12 ರಿಂದ ಸಂಪೂರ್ಣ ನಿಷೇಧ ಹೇರಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಗೋಧಿ ಮತ್ತು ಗೋಧಿ ಹಿಟ್ಟಿನ ಜಾಗತಿಕ ಪೂರೈಕೆ ಅಡೆತಡೆಗಳಿಂದಾಗಿ ಅನೇಕ ಏರುಪೇರು ಕಾಣುತ್ತಿದೆ. ಕಡಿಮೆ ಉತ್ಪಾದನೆ ಮತ್ತು ಜಾಗತಿಕ ಬೆಲೆಗಳು ತೀವ್ರವಾಗಿ ಹೆಚ್ಚಿರುವುದು ಸೇರಿದಂತೆ ತನ್ನದೇ ದೇಶದ ಜನರ ಆಹಾರ ಭದ್ರತೆಯ ಬಗ್ಗೆ ಭಾರತ ಚಿಂತಿಸಿ ಈ ಕ್ರಮಕ್ಕೆ ಮುಂದಾಗಿದೆ. ಇದರಿಂದಾಗಿ ರಫ್ತು ವ್ಯಾಪಾರಕ್ಕೆ ನಿಷೇಧದ ನಿರ್ಧಾರವನ್ನು ತೆಗೆದುಕೊಂಡಿದೆ.
ಗೋಧಿ ರಫ್ತು ನಿಷೇಧವಾದಾಗ ಭಾರತದ ಈ ನಿರ್ಧಾರವನ್ನು US, ಕೆನಡಾ, EU ಮತ್ತು ಆಸ್ಟ್ರೇಲಿಯಾ ಸೇರಿದಂತೆ ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳು ಈ ನಿರ್ಧಾರದ ವಿರುದ್ಧ ಮಾತನಾಡಿದ್ದವು. ಇದೀಗ ಗೋಧಿ ಹಿಟ್ಟಿನ ರಫ್ತಿಗೆ ನಿಷೇಧ ಹೇರಿದ ಬಳಿಕ ಇನ್ನಷ್ಟು ಅಪಸ್ವರ ಕೇಳಿ ಬರುತ್ತಿದೆ. ಕೇಂದ್ರ ಸರ್ಕಾರವು ಗೋಧಿಯ ರಫ್ತು ನೀತಿಯನ್ನು ನಿಷೇಧಿತ ವರ್ಗದ ಅಡಿಯಲ್ಲಿ ತಿದ್ದುಪಡಿ ಮಾಡಿದ ಬಳಿಕ ಈ ನಿರ್ಧಾರಕ್ಕೆ ಮುಂದಾಗಿದೆ.