ರೆಸ್ಟೋರೆಂಟ್ಗೆ ಹಿಜಾಬ್ ಧರಿಸಿ ಬರುವ ಮಹಿಳೆಯರಿಗೆ ನಿರ್ಬಂಧ ವಿಧಿಸಿದ್ದಕ್ಕಾಗಿ ಇಸ್ಲಾಮಿಕ್ ದೇಶ ಬಹ್ರೈನ್ನ ಅದಿಲ್ಯಾ ನಗರದಲ್ಲಿ ಭಾರತೀಯ ಮೂಲದವರ ‘ಲ್ಯಾಂಟರ್ನ್ ರೆಸ್ಟೋರೆಂಟ್’ನ್ನು ಸ್ಥಗಿತಗೊಳಿಸಲಾಗಿದೆ ಎಂದು ಗಲ್ಫ್ ಡೈಲಿ ನ್ಯೂಸ್ ವರದಿ ಮಾಡಿದೆ.
ಲ್ಯಾಂಟರ್ನ್ ರೆಸ್ಟೋರೆಂಟ್ ಆಡಳಿತ ಮಂಡಳಿಯು ಹಿಜಾಬ್ದಾರಿ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದ ಘಟನೆಯ ಬಗ್ಗೆ ಕ್ಷಮೆ ಕೇಳಿ, ಇದಕ್ಕಾಗಿ ವಿಷಾಧಿಸುತ್ತೇವೆ ಎಂದು ಹೇಳಿಕೆ ಬಿಡುಗಡೆ ಮಾಡಿದೆ. ಭಾರತೀಯ ಮೂಲದ ಕೆಲಸದ ಮ್ಯಾನೇಜರ್ನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ ಎಂದು ರೆಸ್ಟೋರೆಂಟ್ ಹೇಳಿದೆ.
ಹಿಜಾಬ್ದಾರಿ ಮಹಿಳೆಯರು ರೆಸ್ಟೋರೆಂಟ್ ಪ್ರವೇಶಕ್ಕೆ ನಿರ್ಬಂಧ ವಿಧಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಈ ಬಳಿಕ ಬಹ್ರೈನ್ನ ಪ್ರವಾಸೋದ್ಯಮ ಮತ್ತು ಪ್ರದರ್ಶನ ಇಲಾಖೆಯು ತನಿಖೆಯನ್ನು ಆರಂಭಿಸಿದೆ. ಅಲ್ಲದೇ, ದೇಶದ ಕಾನೂನುಗಳನ್ನು ಉಲ್ಲಂಘಿಸುವ ಕಾರ್ಯ ಮಾಡಬೇಡಿ ಎಂದು ತಿಳಿಸಿದೆ. ಮಾಧ್ಯಮಕ್ಕೆ ಹೇಳಿಕೆ ಬಿಡುಗಡೆ ಮಾಡಿರುವ ಅಲ್ಲಿನ ಅಧಿಕಾರಿಗಳು, ಜನರ ವಿರುದ್ಧ ಯಾವುದೇ ತಾರತಮ್ಯಗಳನ್ನು ಯಾರೂ ಮಾಡುವಂತಿಲ್ಲ. ಅದರಲ್ಲೂ ವಿಶೇಷವಾಗಿ, ಅವರ ರಾಷ್ಟ್ರೀಯತೆ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ ಎಂದು ಹೇಳಿದ್ದಾರೆ.
ಈ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ರೆಸ್ಟೋರೆಂಟ್ ಆಡಳಿತ ಮಂಡಳಿ, ಸುಂದರ ಬಹ್ರೈನ್ ದೇಶದಲ್ಲಿ ನಾವು 35 ವರ್ಷಗಳಿಂದ ಎಲ್ಲರಿಗೂ ಸೇವೆ ಸಲ್ಲಿಸುತ್ತಿದ್ದೇವೆ. ಪ್ರತಿಯೊಬ್ಬರಿಗೂ ಸ್ವಾಗತವಿದೆ. ತಪ್ಪು ಮಾಡಿದ ಮ್ಯಾನೇಜರ್ ಅನ್ನು ಕೆಲಸದಿಂದ ತೆಗೆದು ಹಾಕಿದ್ದೇವೆ. ನಿಮಗಾಗಿ ಊಟ ಕಾಯುತ್ತಿದೆ ಎಂದು ಹೇಳಿದೆ.
ರೆಸ್ಟೋರೆಂಡ್ ಆಡಳಿತ ಮಂಡಳಿ ಕ್ಷಮೆ ಕೋರಿದ ಮೇಲೆ ರೆಸ್ಟೋರೆಂಟ್ ಕಾರ್ಯನಿರ್ವಹಣೆಗೆ ಅಲ್ಲಿನ ಸರ್ಕಾರ ಅನುಮತಿ ನೀಡಿದೆ.