ಭಾರತದಲ್ಲಿ ಚಿಲ್ಲರೆ ಹಣದುಬ್ಬರ (ಬೆಲೆಏರಿಕೆ) ಏಪ್ರಿಲ್ನಲ್ಲಿ ಶೇಕಡಾ 7.9ರ ಗಡಿ ತಲುಪಿದೆ. 2014ರ ಸೆಪ್ಟೆಂಬರ್ ಬಳಿಕ ಇದೇ ಮೊದಲ ಬಾರಿಗೆ ಹಣದುಬ್ಬರ ಪ್ರಮಾಣದಲ್ಲಿ ಭಾರೀ ಹೆಚ್ಚಳವಾಗಿದೆ.
ಮಾರ್ಚ್ನಲ್ಲಿ ಬೆಲೆಏರಿಕೆ ಪ್ರಮಾಣ ಶೇಕಡಾ 6.95ರಷ್ಟಿತ್ತು. ಇಂಧನ ಬೆಲೆ ಮತ್ತು ಆಹಾರ ಉತ್ಪನ್ನಗಳ ಬೆಲೆ ಏರಿಕೆಯೇ ಹಣದುಬ್ಬರ ಏರಿಕೆಗೆ ಕಾರಣ.
ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಬೆಲೆ ಏರಿಕೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ)ಗೆ ವಿಧಿಸಿರುವ ಮಿತಿಗಿಂತ ಹೆಚ್ಚಳವಾಗಿದೆ. ಹಣದುಬ್ಬರವನ್ನು 2026ರವರೆಗೆ ಶೇಕಡಾ 2ರಿಂದ 4ರ ನಡುವೆ ವಿಪರೀತ ಸ್ಥಿತಿಯಲ್ಲಿ ಶೇಕಡಾ 6ರೊಳಗೆ ನಿಯಂತ್ರಿಸುವ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ದೇಶದ ಅತ್ಯುನ್ನತ ಬ್ಯಾಂಕ್ಗೆ ನೀಡಿದೆ.
ಮಾರ್ಚ್ ತಿಂಗಳಲ್ಲೇ ಹಣದುಬ್ಬರ ಶೇಕಡಾ 6ರ ಗಡಿ ದಾಟಿರುವ ಹಿನ್ನೆಲೆಯಲ್ಲಿ ಈಗಾಗಲೇ ಆರ್ಬಿಐ ರೆಪೋ ದರವನ್ನು ಶೇಕಡಾ 0.4ರಷ್ಟು, ನಗದು ಮೀಸಲು ಅನುಪಾತವನ್ನು ಶೇಕಡಾ 0.5ರಷ್ಟು ಹೆಚ್ಚಳ ಮಾಡುವ ಮೂಲಕ ಹಣಕಾಸು ವ್ಯವಸ್ಥೆಯಲ್ಲಿ ಹಣದ ಹರಿವಿಕೆಯ ಮೇಲೆ ಕಡಿವಾಣ ಹಾಕಿದೆ. ಆರ್ಬಿಐ ರೆಪೋ ದರ ಹೆಚ್ಚಳದಿಂದ ಬ್ಯಾಂಕ್ಗಳೂ ಈಗಾಗಲೇ ಸಾಲದ ಮೇಲಿನ ಬಡ್ಡಿ ದರವನ್ನು ಏರಿಸಿವೆ.
ಈಗ ಮತ್ತೆ ಹಣದುಬ್ಬರ ದರ ಶೇಕಡಾ 8ರ ಗಡಿಗೆ ಮುಟ್ಟಿರುವ ಹಿನ್ನೆಲೆಯಲ್ಲಿ ಮತ್ತೆ ಸಾಲದ ಮೇಲಿನ ಬಡ್ಡಿ ದರ ಹೆಚ್ಚಳ ಆಗುವ ಸಾಧ್ಯತೆ ಇದೆ.
ಹಣದುಬ್ಬರ ಪರಿಣಾಮ ಡಾಲರ್-ರೂಪಾಯಿ ವಿನಿಮಯ ಮೌಲ್ಯದ ಮೇಲೂ ಪರಿಣಾಮ ಬೀರುವ ನಿರೀಕ್ಷೆ ಇದ್ದು, ಈಗಾಗಲೇ 77 ರೂಪಾಯಿಗಿಂತಲೂ ಕೆಳಕ್ಕೆ ಕುಸಿದಿರುವ ರೂಪಾಯಿ ಮೌಲ್ಯ ಇನ್ನಷ್ಟು ಕುಸಿತ ಕಾಣಬಹುದು.
ಇದೇ ಮೇ 26ರಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ 8 ವರ್ಷ ತುಂಬಲಿದೆ.