ವಿಯೆಟ್ನಾಂದಲ್ಲಿ ನಡೆದ ಅಂತರಾಷ್ಟ್ರೀಯ ಮಾಡೆಲಿಂಗ್ ಸ್ಪರ್ಧೆ, For pan continental international 2022 ನಲ್ಲಿ ಭಾರತದಿಂದ ಆಯ್ಕೆಯಾಗಿದ್ದ ಏಕೈಕ ಸ್ಪರ್ಧಾಳು ರಾಮು ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ರನ್ನರ್ ಆಗಿ ( ದ್ವಿತಿಯ ) ಹೊರ ಹೊಮ್ಮಿದ್ದಾರೆ. ಈ ಮೂಲಕ ವಿದೇಶದಲ್ಲಿ ಭಾರತದ ಕೀರ್ತಿ ಹೆಚ್ಚಿಸಿದ್ದಾರೆ.
ಏಪ್ರೀಲ್ 3 ರಿಂದ 10 ರ ನವರೆಗೆ ಈ ಸ್ಪರ್ಧೆ ನಡೆದಿತ್ತು. ಒಟ್ಟು 14 ದೇಶಗಳ ಸ್ಪರ್ಧಾಳುಗಳು ಭಾಗವಹಿಸಿದ್ದರು. ಇದರಲ್ಲಿ ಪ್ರಥಮ ಸ್ಥಾನವನ್ನ ಫಿಲಿಪೈನ್ಸ್ ಪಾಲಾದರೆ, ದ್ವಿತೀಯ ಸ್ಥಾನವನ್ನ ಭಾರತ ಅಲಂಕರಿಸಿದೆ. ಭಾರತದಿಂದ ಪ್ರತಿನಿಧಿಸಿದ್ದ ರಾಮು ಅವರು ನಮ್ಮ ಬೆಂಗಳೂರಿನ ವೈಯಾಲಿಕಾವಲ್ ನವರೇ ಅನ್ನೋದು ಹೆಮ್ಮೆಯ ವಿಚಾರ. ರಾಮುವಿನ ಈ ಸಾಧನೆಯನ್ನ ಬೆಂಗಳೂರು ನಗರ ಜಿಲ್ಲಾಧಿಕಾರಿ ಎಂ ಮಂಜುನಾಥ್ ಶ್ಲಾಘಿಸಿ, ಶುಭ ಹಾರೈಸಿದ್ದಾರೆ. ಕ್ಷೇತ್ರದ ಶಾಸಕ ಹಾಗೂ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಅವರೂ ಶುಭ ಹಾರೈಸಿದ್ದಾರೆ.
ಈ ಬಗ್ಗೆ ಪ್ರತಿಕ್ಷಣ ನ್ಯೂಸ್ನೊಂದಿಗೆ ಮಾತನಾಡಿರುವ ರಾಮು ಅವರು, ಸತತ ಮೂರು ವರ್ಷದಿಂದ ಮಿಸ್ಟರ್ ಇಂಡಿಯಾ ಸ್ಪರ್ಧೆಗೆ ಭಾಗವಹಿಸುತ್ತಿದ್ದೆ. ಟಾಪ್ 5 ಕ್ಕೆ ತೃಪ್ತಿಪಟ್ಟಿದ್ದೆ. ಕಳೆದ ವರ್ಷ ವಿನ್ನರ್ ಆಗಿ, ಮಿಸ್ಟರ್ ಪ್ಯಾನ್ ಕಾಂಟಿನೆಂಟಲ್ ಇಂಟರ್ ನ್ಯಾಷನಲ್ ಸ್ಪರ್ಧೆಗೆ ಆಯ್ಕೆಯಾಗಿದ್ದೆ. ಈ ವರ್ಷದ ಸ್ಪರ್ಧೆಯಲ್ಲಿ ದ್ವಿತಿಯ ಸ್ಥಾನ ಬಂದಿದ್ದಕ್ಕೆ ಖುಷಿಯಾಗಿದೆ. ಅದಕ್ಕಿಂತ ಮಿಗಿಲಾಗಿ ಭಾರತದಿಂದ ಸ್ಪರ್ಧೆ ಮಾಡಬೇಕು ಎಂಬ ಕನಸು ನನಸಾಗಿದೆ. ವಿದೇಶದಲ್ಲಿ ಭಾರತೀಯರಿಗೆ ಕೊಡುವ ಗೌರವ, ಪ್ರೀತಿ ಕಂಡು ಅತೀವ ಖುಷಿಯಾಗಿದೆ. ಇಷ್ಟು ದಿನ ನನಗೆ ಬೆಂಬಲಿಸಿ, ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ.