ಐಪಿಎಲ್ ಮಾಧ್ಯಮ ಹಕ್ಕಿನ ಪ್ರಸಾರಕ್ಕಾಗಿ ಜಗತ್ತಿನ ಇಬ್ಬರು ಶ್ರೀಮಂತ ಉದ್ಯಮಿಗಳ ನಡುವೆ ತೀವ್ರ ಜಿದ್ದಾಜಿದ್ದಿ ನಡೆದಿದೆ. ಭಾರತದ ರಿಲಯನ್ಸ್ ಸಮೂಹಗಳ ಅಧ್ಯಕ್ಷ ಮುಖೇಶ್ ಅಂಬಾನಿ ಹಾಗೂ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ನಡುವೆ ನೇರಾನೇರ ಈ ಸ್ಪರ್ಧೆ ನಡೆಯುತ್ತಿದೆ.
ಅತಿ ವೇಗವಾಗಿ ಬೆಳೆಯುತ್ತಿರುವ ವಿಶ್ವದ ಮೊದಲ ಸ್ಪೋರ್ಟ್ ಕಾರ್ಯಕ್ರಮವಾಗಿ ಐಪಿಎಲ್ ಗುರುತಿಸಿಕೊಂಡಿದೆ. ವಿಶ್ವದಾದ್ಯಂತ ಬರೋಬ್ಬರಿ 100 ಕೋಟಿಗೂ ಅಧಿಕ ವೀಕ್ಷಕರನ್ನು ಪಡೆದಿರುವ ಐಪಿಎಲ್, 46 ಸಾವಿರ ಕೋ.ರೂಗಳಿಗೂ ಹೆಚ್ಚಿನ ಬ್ರಾಂಡ್ ಮೌಲ್ಯ ಹೊಂದಿದೆ.
ಜೂನ್ 12 ರಂದು ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಅಮೆಜಾನ್ ಹಾಗೂ ರಿಲಯನ್ಸ್ ಕಂಪೆನಿಗಳು ಅಗ್ರ ಎರಡು ಸ್ಪರ್ಧಿಗಳೆಂದು ನಿರೀಕ್ಷಿಸಲಾಗಿದೆ. ಭಾನುವಾರ ನಡೆಯುವ ಐದು ವರ್ಷಗಳ ಟೆಲಿಕಾಸ್ಟಿಂಗ್ ಮತ್ತು ಆನ್ಲೈನ್ ಸ್ಟ್ರೀಮಿಂಗ್ ಹರಾಜು ಕಾರ್ಯಕ್ರಮಕ್ಕೆ ಹಲವಾರು ಬಿಡ್ದಾರರು ಭಾಗವಹಿಸುವ ಸಾಧ್ಯತೆಯಿದೆ.
ಪೋರ್ಬ್ಸ್ ಶ್ರೀಮಂತರ ಪಟ್ಟಿಯ ಪ್ರಕಾರ ಅಮೆಜಾನ್ ಸ್ಥಾಪಕ ಜೆಪ್ ಬೆಜೋಸ್ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 171 ಬಿಲಿಯನ್ ಡಾಲರ್ ಆಸ್ತಿ ಹೊಂದುವ ಮೂಲಕ 2 ನೇ ಸ್ಥಾನದಲ್ಲಿದ್ದಾರೆ. ರಿಲಯನ್ಸ್ ಸ್ಥಾಪಕ ಮುಖೇಶ್ ಅಂಬಾನಿ 90.7 ಡಾಲರ್ ಆಸ್ತಿ ಹೊಂದುವ ಮೂಲಕ 10 ನೇ ಸ್ಥಾನದಲ್ಲಿದ್ದಾರೆ.
ಅಮೇಜಾನ್, ರಿಲಯನ್ಸ್ ಕಂಪೆನಿಗಳ ಜೊತೆಗೆ ವಾಲ್ಟ್ ಡಿಸ್ನಿ ಕಂ ಹಾಗೂ ಸೋನಿ ಗ್ರೂಪ್ ತೀವ್ರ ಪೈಪೋಟಿ ನೀಡಬಹುದು ಎಂದು ತಿಳಿದುಬಂದಿದೆ.
ಭಾರತದ ಮುಖೇಶ್ ಅಂಬಾನಿ ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಐಪಿಎಲ್ ಮಾಧ್ಯಮ ಪ್ರಸಾರದ ಹಕ್ಕು ರಿಲಯನ್ಸ್ ಸಂಸ್ಥೆಗೆ ದೊರಕುವ ಸಾಧ್ಯತೆಗಳು ಇವೆ ಎಂದು ಹೇಳಲಾಗುತ್ತಿದೆ.