ADVERTISEMENT
ಬಿಹಾರದಲ್ಲಿ ಬಿಜೆಪಿಗೆ ನಿತೀಶ್ ಕುಮಾರ್ ಹೊರೆಯೇ..? ಒಂದೂವರೆ ವರ್ಷದ ಬಳಿಕ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮತ್ತೆ ಬಿಜೆಪಿ ಮೈತ್ರಿಕೂಟದ ತೆಕ್ಕೆಗೆ ಬಂದಿದ್ದಾರೆ.
ಜಯಪ್ರಕಾಶ್ ನಾರಾಯಣ್ ಅವರ ಹೋರಾಟದ ಹೊತ್ತಲ್ಲಿ ಪ್ರವರ್ಧನಮಾನಕ್ಕೆ ಬಂದ ಸಮಾಜವಾದಿ ರಾಜಕಾರಣಿ 71 ವರ್ಷದ ನಿತೀಶ್ ಕುಮಾರ್ ಅವರು ಕಳೆದ 10 ವರ್ಷಗಳಲ್ಲಿ 4 ಬಾರಿ ಬಣ ಬದಲಿಸಿದ್ದಾರೆ.
2013ರಲ್ಲಿ ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ನಾಯಕತ್ವದ ವಿರುದ್ಧವೇ ಸಿಡಿದೆದ್ದ ನಿತೀಶ್ ಅವರು 2014ರ ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದ್ದರು.
2015ರಲ್ಲಿ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಲಾಲೂ ಪ್ರಸಾದ್ ಯಾದವ್ ಅವರ ರಾಷ್ಟಿçÃಯ ಜನತಾದಳ, ಕಾಂಗ್ರೆಸ್ ಜೊತೆಗೆ ಸೇರಿ ಹೊಂದಾಣಿಕೆ ಮಾಡಿಕೊಂಡು ಮಹಾಮೈತ್ರಿಕೂಟದಲ್ಲಿ ಮತ್ತೆ ಮುಖ್ಯಮಂತ್ರಿಯಾದರು.
ಆದರೆ 2017ರ ಜುಲೈನಲ್ಲಿ ಮಹಾಮೈತ್ರಿಕೂಟದಿಂದ ಹೊರಬಂದು ಬಿಜೆಪಿಯೊಂದಿಗೆ ಮೈತ್ರಿಯನ್ನೂ ಮಾಡಿಕೊಂಡು ಎನ್ಡಿಎ ಸರ್ಕಾರದಲ್ಲಿ ಮುಖ್ಯಮಂತ್ರಿಯಾದರು.
2019ರ ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟದಲ್ಲಿದ್ದೇ ಚುನಾವಣೆ ಎದುರಿಸಿದ್ದರು ನಿತೀಶ್ ಕುಮಾರ್.2020ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆಗಿದ್ದೇ ಚುನಾವಣೆ ಎದುರಿಸಿ ಮತ್ತೆ ಮುಖ್ಯಮಂತ್ರಿಯಾದರು.
ಆದರೆ 2022ರ ಆಗಸ್ಟ್ನಲ್ಲಿ ಎನ್ಡಿಎ ಮೈತ್ರಿಕೂಟದಿಂದ ಹೊರಬಂದು ಆರ್ಜೆಡಿ+ಕಾಂಗ್ರೆಸ್ ಒಳಗೊಂಡ ಮೈತ್ರಿಕೂಟದೊಂದಿಗೆ ಸೇರಿಕೊಂಡು ಹೊಸ ಸರ್ಕಾರ ರಚಿಸಿ ತಾವೇ ಮಗದೊಮ್ಮೆ ಮುಖ್ಯಮಂತ್ರಿಯಾದರು.
ನಿತೀಶ್ ಕುಮಾರ್ ಅವರನ್ನು ಬಿಜೆಪಿ ಮುಖ್ಯಮಂತ್ರಿಯಾಗಿ ಸ್ವೀಕರಿಸುತ್ತಾ..? ಖಂಡಿತಾ ಇಲ್ಲ, ಅವರು (ನಿತೀಶ್ ಕುಮಾರ್) ಈಗ ಹೊರೆಯಾಗಿದ್ದಾರೆ. 2000ರ ವಿಧಾನಸಭಾ ಚುನಾವಣೆ ಬಳಿಕ ಅವರಿಗೆ ಮತ ವರ್ಗಾವಣೆಯ ಸಾಮರ್ಥ್ಯ ಕುಸಿದಿದೆ, ಅವರ ಜನಪ್ರಿಯತೆ ಪ್ರತಿದಿನವೂ ಕುಸಿಯುತ್ತಿದೆ. 2020ರ ವಿಧಾನಸಭಾ ಚುನಾವಣೆಗೂ ಮೊದಲು ನಾವು ಮೂರು ಸಮೀಕ್ಷೆ ನಡೆಸಿದ್ವಿ ಮತ್ತು ಆ ಮೂರು ಸಮೀಕ್ಷೆಯೂ ಅವರ (ನಿತೀಶ್ ಕುಮಾರ್) ಜನಪ್ರಿಯತೆ ಕುಸಿಯುತ್ತಿರುವುದನ್ನು ತೋರಿಸಿದೆ.
-ಜನವರಿ 15, 2023ರಂದು ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ
ಈ ಬಾರಿ ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ಪಕ್ಷ ಐದು ಲೋಕಸಭಾ ಕ್ಷೇತ್ರಗಳಲ್ಲೂ ಗೆಲ್ಲಲ್ಲ. ನಿತೀಶ್ ಕುಮಾರ್ ಯಾವ ಪಕ್ಷದೊಂದಿಗೆ ಚುನಾವಣೆಗೆ ಹೋಗುತ್ತಾರೋ ಆ ಪಕ್ಷವೇ ಮುಳುಗುತ್ತೆ. ನಿತೀಶ್ ಕುಮಾರ್ ಮಹಾಮೈತ್ರಿಕೂಟದ ಜೊತೆಗೆ ಹೋದರೆ ಮಹಾಮೈತ್ರಿಕೂಟ ಮುಳುಗುತ್ತೆ, ಎನ್ಡಿಎ ಜೊತೆಗೆ ಹೋದರೆ ಎನ್ಡಿಎ ಮುಳುಗುತ್ತೆ. ನಿತೀಶ್ ಕುಮಾರ್ ಮೇಲೆ ಯಾವ ಭರವಸೆ ಇಡಲು ಸಾಧ್ಯವಿಲ್ಲ.
– ಪ್ರಮುಖ ಚುನಾವಣಾ ವಿಶ್ಲೇಷಕ ಪ್ರಶಾಂತ್ ಕಿಶೋರ್
ಕಳೆದ 2 ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರ ಪಕ್ಷ ಕುಸಿತ ಕಂಡಿರುವುದು ಸ್ಪಷ್ಟ.
2015ರ ವಿಧಾನಸಭಾ ಚುನಾವಣೆಯಲ್ಲಿ 243 ಕ್ಷೇತ್ರಗಳ ಪೈಕಿ ಜೆಡಿಯು ಗೆದ್ದಿದ್ದು 71 ಸೀಟು. ಗಳಿಸಿದ್ದು ಶೇಕಡಾ 16.80ರಷ್ಟು ಮತಗಳನ್ನು ಗಳಿಸಿತ್ತು. 2010ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಜೆಡಿಯುಗೆ 44 ಸ್ಥಾನಗಳ ನಷ್ಟ ಮತ್ತು ಶೇಕಡಾ 5.81ರಷ್ಟು ಮತ ಇಳಿಕೆಯಾಗಿತ್ತು.
2020ರಲ್ಲಿ ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಲಾದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು 43 ಸೀಟುಗಳನ್ನು ಗೆದ್ದುಕೊಂಡಿತ್ತು. ಶೇಕಡಾ 15.39ರಷ್ಟು ಮತಗಳನ್ನು ಗಳಿಸಿತ್ತು.
ಅಂದರೆ 10 ವರ್ಷಗಳಲ್ಲಿ ಬಿಹಾರದಲ್ಲಿ ಜೆಡಿಯು ಬರೋಬ್ಬರೀ 72 ಸೀಟುಗಳನ್ನು ಕಳೆದುಕೊಳ್ತು ಮತ್ತು ಅದರ ಶೇಕಡಾವಾರು ಮತ ಗಳಿಕೆ ಶೇಕಡಾ 7.25ರಷ್ಟು ಇಳಿಕೆಯಾಗಿತ್ತು.
2014ರಲ್ಲಿ ಏಕಾಂಗಿಯಾಗಿ ಲೋಕಸಭಾ ಚುನಾವಣೆ ಎದುರಿಸಿದ್ದರು ನಿತೀಶ್. ಆ ಚುನಾವಣೆಯಲ್ಲಿ ಜೆಡಿಯು 18 ಸೀಟುಗಳನ್ನು ಕಳೆದುಕೊಂಡು ಕೇವಲ 2 ಸ್ಥಾನಕ್ಕೆ ಕುಸಿಯಿತು. ಶೇಕಡಾ 15.80ಯಷ್ಟು ಮತ ಗಳಿಸುವ ಮೂಲಕ ಶೇಕಡಾ 8.24ರಷ್ಟು ಮತ ನಷ್ಟವೂ ಆಯಿತು.
2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆಗಿನ ಮೈತ್ರಿಯಲ್ಲಿ ಜೆಡಿಯು 16 ಸೀಟುಗಳನ್ನು ಗೆದ್ದುಕೊಳ್ತು ಮತ್ತು ಶೇಕಡಾ 21.80ರಷ್ಟು ಮತ ಗಳಿಸ್ತು. ಅಂದರೆ ಶೇಕಡಾ 8.24ರಷ್ಟು ಮತ ಹೆಚ್ಚಳವಾಯಿತು.
ಆದರೆ ನಿತೀಶ್ ಕುಮಾರ್ ಮೈತ್ರಿಯಿಂದ ನಷ್ಟ ಆಗಿದ್ದು ಬಿಜೆಪಿಗೇ. 2014ರಲ್ಲಿ ಜೆಡಿಯು ಇಲ್ಲದೇ ಎಲ್ಜೆಪಿ ಮತ್ತು ಆರ್ಎಲ್ಎಸ್ಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ 22 ಲೋಕಸಭಾ ಸೀಟುಗಳನ್ನು ಗೆದ್ದುಕೊಂಡಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅಲೆ ಉತ್ತುಂಗದಲ್ಲಿದ್ದ ಅವಧಿಯಲ್ಲಿ ಜೆಡಿಯು ಮತ್ತೆ ಎನ್ಡಿಎಗೆ ವಾಪಸ್ ಆದರೂ ಬಿಜೆಪಿ 5 ಲೋಕಸಭಾ ಸೀಟುಗಳನ್ನು ಕಳೆದುಕೊಳ್ತು ಮತ್ತು ಅದರ ಶೇಕಡಾವಾರು ಮತ ಗಳಿಕೆಯೂ ಶೇಕಡಾ 5.82ರಷ್ಟು ಕುಸಿತವಾಯಿತು.
2020ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಜೆಡಿಯು ಮೈತ್ರಿಗೆ ಶೇಕಡಾವಾರು 4.96ರಷ್ಟು ಮತ ನಷ್ಟವಾಯಿತು.
ಈ ಅಂಕಿಅಂಶಗಳನ್ನು ಗಮನಿಸಿದರೆ ನಿತೀಶ್ ಕುಮಾರ್ ಈಗ ಬಿಹಾರದ ಜನಪ್ರಿಯ ನಾಯಕನಾಗಿ ಉಳಿದಿಲ್ಲ. ಇವತ್ತು 9ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ನಿತೀಶ್ ಬಿಜೆಪಿಗೆ ಹೊರೆಯಾದರೂ ಅಚ್ಚರಿಯೇನಿಲ್ಲ.
ADVERTISEMENT