ಭಾರತೀಯ ರಿಸರ್ವ್ ಬ್ಯಾಂಕ್ ಯುಪಿಐ(UPI) ಪಾವತಿ ಸೇವೆಗಳ ಮೇಲೆ ಶುಲ್ಕ ವಿಧಿಸುವ ಕುರಿತು ಗಂಭೀರ ಚಿಂತನೆಯಲ್ಲಿದೆ ಎಂಬ ಸುದ್ದಿಗಳ ನಡುವೆಯೇ, ಈ ಕುರಿತು ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ ಯುಪಿಐ ಪಾವತಿ ಸೇವೆಗಳ ಮೇಲೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಹೇಳಿದೆ.
ಈ ಕುರಿತು ಸ್ಪಷ್ಟನೆ ನೀಡಿರುವ ಕೇಂದ್ರ ಹಣಕಾಸು ಸಚಿವಾಲಯ, ಯುಪಿಐ(UPI) ಸೇವೆಗಳ ಮೇಲೆ ಯಾವುದೇ ಶುಲ್ಕಗಳನ್ನು ಹಾಕುತ್ತಿಲ್ಲ. ಈ ಕುರಿತಂತೆ ಯಾವುದೇ ರೀತಿಯ ಚರ್ಚೆಗಳು ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ. UPI ಸಾರ್ವಜನಿಕರಿಗೆ ಅಪಾರ ಅನುಕೂಲತೆ ಮತ್ತು ಆರ್ಥಿಕತೆಗೆ ಉತ್ಪಾದಕತೆಯ ಲಾಭಗಳೊಂದಿಗೆ ಡಿಜಿಟಲ್ ಸಾರ್ವಜನಿಕ ಸರಕಾಗಿದೆ. UPI ಸೇವೆಗಳಿಗೆ ಯಾವುದೇ ಶುಲ್ಕವನ್ನು ವಿಧಿಸಲು ಸರ್ಕಾರದಲ್ಲಿ ಯಾವುದೇ ಪರಿಗಣನೆ ಇಲ್ಲ. ವೆಚ್ಚ ವಸೂಲಾತಿಗಾಗಿ ಸೇವಾ ಪೂರೈಕೆದಾರರ ಕಾಳಜಿಯನ್ನು ಇತರ ವಿಧಾನಗಳ ಮೂಲಕ ಪೂರೈಸಬೇಕು ಎಂದು ಟ್ವೀಟ್ ಮಾಡಿದೆ.
ಇದನ್ನೂ ಓದಿ : ಬ್ಯಾಂಕ್ನಲ್ಲಿ ದುಡ್ಡಿಟ್ಟರೂ ಶುಲ್ಕ, ದುಡ್ಡು ತೆಗೆದರೂ ದಂಡ – ಜನಸಾಮಾನ್ಯರಿಗೆ ಬ್ಯಾಂಕುಗಳ ಶಾಕ್
ಯಪಿಐ(UPI) ಪಾವತಿ ಸೇವೆಗಳ ಮೇಲೆ ಶುಲ್ಕ ವಿಧಿಸುವ ಚಿಂತನೆ ಸದ್ಯಕ್ಕೆ ಇಲ್ಲ. ಆದರೆ, ಮುಂದಿನ ದಿನಗಳಲ್ಲಿ ಯುಪಿಐ ಸೇವೆಗಳಿಗೆ ಶುಲ್ಕ ವಿಧಿಸಬಹುದೇ ಎನ್ನುವ ಬಗ್ಗೆ ಆರ್ಬಿಐ ಚಿಂತಿಸುತ್ತಿದೆ ಎನ್ನಲಾಗಿತ್ತು.
ಈ ಬೆನ್ನಲ್ಲೇ ಆರ್ಬಿಐ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಸಾರ್ವಜನಿಕ ವಲಯದಿಂದ ಆಕ್ರೋಶ ಕೇಳಿಬಂದಿತ್ತು. ಇದೀಗ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ ಯುಪಿಐ ಪಾವತಿಗಳ ಮೇಲೆ ಶುಲ್ಕ ವಿಧಿಸುವ ಬಗ್ಗೆ ಯಾವುದೇ ಚಿಂತನೆ ಇಲ್ಲ ಎಂದು ಹೇಳಿದೆ.
ಯುಪಿಐ ವಹಿವಾಟುಗಳ ಪ್ರಮಾಣದ ದೃಷ್ಟಿಯಿಂದ ದೇಶದ ಏಕೈಕ ಅತಿದೊಡ್ಡ ಚಿಲ್ಲರೆ ಪಾವತಿ ವ್ಯವಸ್ಥೆಯಾಗಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ ಅಂಕಿಅಂಶಗಳ ಪ್ರಕಾರ, 338 ಬ್ಯಾಂಕುಗಳು ಯುಪಿಐನಲ್ಲಿ ಸಕ್ರಿಯವಾಗಿವೆ ಮತ್ತು ಒಟ್ಟು ವಹಿವಾಟುಗಳ ಪ್ರಮಾಣವು 638.8 ಕೋಟಿಯಾಗಿದೆ. ಪ್ರತಿದಿನ 10.62 ಲಕ್ಷ ಕೋಟಿ ರೂ. ಮೌಲ್ಯದ, 21 ಕೋಟಿಗೂ ಹೆಚ್ಚು ವಹಿವಾಟುಗಳು ನಡೆಯುತ್ತಿವೆ.
ಇದನ್ನೂ ಓದಿ : SBI ನಲ್ಲಿ 6100 ಹುದ್ದೆಗಳಿಗೆ ಅರ್ಜಿ ಆಹ್ವಾನ: ಈಗಲೇ ಅರ್ಜಿ ಸಲ್ಲಿಸಿ