ಕೆಜಿಎಫ್ ಬಾಬು ಎಂದೇ ಖ್ಯಾತಿಗಳಿಸಿದ್ದ ಬಹುಕೋಟಿ ಆಸ್ತಿಯ ಒಡೆಯ ಯೂಸೂಫ್ ಷರೀಫ್ ಅವರ ಐಷಾರಾಮಿ ಮನೆ ಮೇಲೆ ಇಂದು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ವಸಂತನಗರದಲ್ಲಿರುವ ರುಕ್ಸಾನಾ ಪ್ಯಾಲೆಸ್ ಮನೆ ಮೇಲೆ ಬೆಳ್ಳಂಬೆಳಿಗ್ಗೆ 7:30 ಕ್ಕೆ ಐಟಿ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಯ ಪರಿಶೀಲನೆ ನಡೆಸುತ್ತಿದ್ದಾರೆ.
ಯೂಸೂಫ್ ಷರೀಫ್ ಅವರು ಇತ್ತೀಚೆಗೆ ವಿಧಾನಪರಿಷತ್ ಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬೆಂಗಳೂರು ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದರು. ಅಪಾರ ಹಣದ ಖರ್ಚಿನ ನಡುವೆಯೂ ಇವರು ಹೀನಾಯವಾಗಿ ಸೋಲು ಕಂಡಿದ್ದರು.
ಚುನಾವಣಾ ಆಯೋಗಕ್ಕೆ ಇವರು 1,743 ಕೋ.ರೂ ಗಳ ಆಸ್ತಿಯನ್ನು ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಆದರೆ, ಇವರ ಆಸ್ತಿ ಇದಕ್ಕಿಂತಲೂ ಇನ್ನೂ ಹಲವು ಪಟ್ಟು ಅಧಿಕವಾಗಿರಬಹುದು ಎಂದು ಐಟಿ ಇಲಾಖೆ ಅನುಮಾನಿಸಿದೆ. ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯೂ ಟ್ವೀಟ್ ಮಾಡಿ ಕೆಜಿಎಫ್ ಬಾಬು ಅವರ ಆಸ್ತಿ 4 ಸಾವಿರ ಕೋಟಿಯೋ ಅಥವಾ 7 ಸಾವಿರ ಕೋಟಿಯೋ ಎಂದು ಡಿಕೆ ಶಿವಕುಮಾರ್ ರನ್ನು ಪ್ರಶ್ನಿಸಿತ್ತು.