ನವದೆಹಲಿ: ಬಿಜೆಪಿಯಿಂದ ಅಸಮಾಧಾನಗೊಂಡು ಕಾಂಗ್ರೆಸ್ ಪಕ್ಷ ಸೇರಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಇಂದು ಬಿಜೆಪಿಗೆ ಮರುಸೇರ್ಪಡೆಯಾಗಿದ್ದಾರೆ.
ಇಂದು ಕಾಂಗ್ರೆಸ್ಗೆ ರಾಜೀನಾಮೆ ನೀಡುವುದರ ಜೊತೆಗೆ ಪರಿಷತ್ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಂದು ದೆಹಲಿಯಲ್ಲಿ ಹೈಕಮಾಂಡ್ ಜೊತೆ ಚರ್ಚಿಸಿರುವ ಶೆಟ್ಟರ್, ಜೆಪಿ ನಡ್ಡಾ ನೇತೃತ್ವದಲ್ಲಿ ಬಿಜೆಪಿಗೆ ಮರುಸೇರ್ಪಡೆಯಾಗಿದ್ದಾರೆ
ವಿಧಾನಪರಿಷತ್ತು ಸದಸ್ಯತ್ವಕ್ಕೆ ರಾಜೀನಾಮೆ: ಕರ್ನಾಟಕ ವಿಧಾನಪರಿಷತ್ತು ಸದಸ್ಯತ್ವಕ್ಕೆ ಈ ದಿನ ನಾನು ನನ್ನ ಸ್ವ-ಇಚ್ಛೆಯಿಂದ ರಾಜೀನಾಮೆ ಸಲ್ಲಿಸಿದ್ದೇನೆ. ದಯವಿಟ್ಟು ನನ್ನ ರಾಜೀನಾಮೆಯನ್ನು ಸ್ವೀಕರಿಸಿಬೇಕಾಗಿ ವಿನಂತಿ. ಇಲ್ಲಿಯವರೆಗೆ ತಾವು ನೀಡಿದ ಸಹಕಾರಕ್ಕಾಗಿ ವಂದನೆಗಳು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಸ್ಪೀಕರ್ ಬಸವರಾಜ ಹೊರಟ್ಟಿ ಅವರಿಗೆ ಬರೆದ ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪ (BS Yediyurappa) ಜೊತೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾತುಕತೆ ನಡೆಸಿದ್ದು, ಬಿಜೆಪಿಗೆ ವಾಪಸ್ ಬರುವಂತೆ ಜಗದೀಶ್ ಶೆಟ್ಟರ್ಗೆ ಯಡಿಯೂರಪ್ಪ ಅವರಿಗೆ ಆಹ್ವಾನ ಕೊಟ್ಟಿದ್ದರು. ವರಿಷ್ಠರನ್ನ ಒಪ್ಪಿಸುತ್ತೇವೆ, ವರಿಷ್ಠರ ಜೊತೆ ಮಾತುಕತೆ ನಡೆಸುತ್ತೇವೆ ಎಂದು ಯಡಿಯೂರಪ್ಪ ಹೇಳಿದ್ದರು. ನಾನು ಓಪನ್ ಆಗಿದ್ದೀನಿ. ಆದರೆ ಬಿಜೆಪಿಯ ನಂಬರ್ 1, 2 ಒಪ್ಪಿಗೆ ಕೊಟ್ಟು ಮಾತನಾಡಬೇಕು. ಮೋದಿ, ಅಮಿತ್ ಶಾ ಜೊತೆ ಮಾತಾನಾಡಿಸಬೇಕು. ಅಲ್ಲೇ ಮಾತುಕತೆ ಆಗಬೇಕು ಎಂದು ಶೆಟ್ಟರ್ ಹೇಳಿದ್ದರು. ಈ ಹಿನ್ನೆಲೆ ಯಡಿಯೂರಪ್ಪ ಹಾಗೂ ವಿಜಯೇಂದ್ರ ಸರ್ಕಸ್ ನಡೆಸಿ ಮಾತುಕತೆಗೆ ಒಪ್ಪಿಸಿದ್ದರು.