ತಮಿಳು ನಟ ಸೂರ್ಯ ಅಭಿನಯದ ಜೈ ಭಿಮ್ ಸಿನೆಮಾದ ವಿವಾದಕ್ಕೆ ಇದೀಗ ಒಂದು ತಿರುವು ದೊರೆತಿದೆ. ವನ್ನಿಯಾರ್ ಸಮುದಾಯದ ಭಾವನೆಗೆ ಧಕ್ಕೆ ತಂದ ಆರೋಪದಲ್ಲಿ ಚಿತ್ರದ ನಾಯಕ ನಟ ಸೂರ್ಯ, ನಿರ್ಮಾಪಕಿ ಜ್ಯೋತಿಕಾ ಹಾಗೂ ನಿರ್ದೇಶಕ ಜ್ಞಾನವೇಲು ವಿರುದ್ಧ ಪ್ರಕರಣ ದಾಖಲಿಸಲು ಕೋರ್ಟ್ ಸೂಚಿಸಿದೆ.
ಕಳೆದ ವರ್ಷ ಬಿಡುಗಡೆಯಾದ ಜೈ ಭೀಮ್ ಸಿನೆಮಾ ದೇಶಾದ್ಯಂತ ಸಾಕಷ್ಟು ಸುದ್ದಿ ಮಾಡಿತ್ತು. ಆ ಬೆನ್ನಲ್ಲೇ ವಿವಾದದ ಕಿಡಿಯೊಂದನ್ನು ತನ್ನ ಬೆನ್ನಿಗೆ ಹಚ್ಚಿಕೊಂಡಿತ್ತು. ಸಿನೆಮಾದ ಕಥಾವಸ್ತು ಜನರ ಮನಸೂರೆಗೊಳ್ಳಲು ಕಾರಣವಾಗಿತ್ತು. ಒಟಿಟಿಯಲ್ಲಿ ದಾಖಲೆಯ ಪ್ರದರ್ಶನ ಕಂಡಿದ್ದ ಈ ಚಿತ್ರ ಇದೀಗ, ದಾದಾ ಸಾಬ್ ಫಾಲ್ಕೆ ಪ್ರಶಸ್ತಿಯ ಫೀಚರ್ ಸಿನೆಮಾ ವಿಭಾಗದಲ್ಲಿ ಪ್ರಶಸ್ತಿ ಗಳಿಸಿಕೊಂಡಿದೆ.
ಚಿತ್ರದಲ್ಲಿ ವನ್ನಿಯಾರ್ ಸಮುದಾಯವನ್ನು ತಪ್ಪಾಗಿ ಚಿತ್ರಿಸಲಾಗಿದೆ ಮತ್ತು ಸಮುದಾಯದ ಜನರನ್ನು ಅತ್ಯಂತ ಕಳಪೆಯಾಗಿ ತೋರಿಸಲಾಗಿದೆ ಎಂದು ‘ರುದ್ರ ವನ್ನಿಯಾರ್ ಸೇನೆ’ 2021 ರಲ್ಲಿಯೇ ಚೆನ್ನೈನ ಸೈದಾಪೇಟ್ ನಲ್ಲಿನ ಕೋರ್ಟ್ ಮೆಟ್ಟಿಲೇರಿತ್ತು.
ಈ ಅರ್ಜಿಯು ಏಪ್ರೀಲ್ 29 ರಂದು ನ್ಯಾಯಾಲಯದ ವಿಚಾರಣೆಗೆ ಬಂದಿತ್ತು. ಕೋರ್ಟ್ಗೆ ಚಿತ್ರದ ನಾಯಕ ಸೂರ್ಯ, ಪತ್ನಿ ಜ್ಯೋತಿಕಾ ಹಾಗೂ ನಿರ್ದೇಶದಕ ಜ್ಞಾನವೇಲು ಅವರನ್ನು ಹಾಜರಾಗುವಂತೆ ಹೇಳಿತ್ತು. ಆದರೆ, ಚಿತ್ರತಂಡದ ಪರವಾಗಿ ಯಾರು ಹಾಜರಾಗಿರಲಿಲ್ಲ.
ಈ ವೇಳೆ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದ ಸಮುದಾಯದ ಪರ ವಕೀಲರು, ಸಮುದಾಯವನ್ನು ಕೆಟ್ಟದ್ದಾಗಿ ತೋರಿಸಲೆಂದೇ ಹಲವಾರು ದೃಶ್ಯಗಳನ್ನು ಚಿತ್ರಿಸಲಾಗಿದೆ ಎಂದು ಹೇಳಿದ್ದರು. ಈ ವಾದವನ್ನು ಆಲಿಸಿದ ಕೋರ್ಟ್ ಕಾನೂನಿನ ಪ್ರಕಾರ ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ವೆಲಾಚೇರಿಯ ಪೊಲೀಸರಿಗೆ ಕೋರ್ಟ್ ನಿರ್ದೇಶನ ನೀಡಿದೆ. ಇದೇ ಮೇ 20 ರಂದು ಕೋರ್ಟ್ ವಿಚಾರನೆ ನಡೆಯಲಿದೆ.
ಕಳೆದ ವರ್ಷ ಚಿತ್ರ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಪಟ್ಟಾಲಿ ಮಕ್ಕಳ ಕಚ್ಚಿ(ಪಿಎಂಕೆ) ಪಕ್ಷದ ನಾಯಕ ಅನ್ಬುಮಣಿ ರಾಮದಾಸ್ ಅವರು ಈ ಚಿತ್ರದಲ್ಲಿ ವನ್ನಿಯಾರ್ ಸಮುದಾಯದ ಮೇಲಿನ ಯೋಜಿತ ದಾಳಿ ಎಂದು ಆರೋಪಿಸಿದ್ದರು. ಆ ಬೆನ್ನಲ್ಲೇ, ವನ್ನಿಯಾರ್ ಸಮುದಾಯದ ಸಂಘ ಈ ವಿವಾದಕ್ಕೆ ಎಂಟ್ರಿ ಕೊಟ್ಟಿತ್ತು.