ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾದ ಬಳಿಕ ವಿಧಾನಸಭಾ ಕ್ಷೇತ್ರಗಳ ವಿಂಗಡಣೆಗಾಗಿ ನೇಮಕವಾಗಿದ್ದ ಆಯೋಗ ತನ್ನ ಅಂತಿಮ ವರದಿಯನ್ನು ಸಲ್ಲಿಸಿದ್ದು, ಜಮ್ಮು-ಕಾಶ್ಮೀರದ ಚುನಾವಣಾ ನಕಾಶೆಯನ್ನು ಅಧಿಕೃತಗೊಳಿಸಲಾಗಿದೆ. ಈ ಮೂಲಕ ಶೀಘ್ರವೇ ವಿಧಾನಸಭಾ ಚುನಾವಣೆ ನಡೆಯುವ ಸಾಧ್ಯತೆ ಹೆಚ್ಚಿದೆ.
2018ರಲ್ಲಿ ವಿಶೇಷ ಸ್ಥಾನಮಾನ ರದ್ದಾದ ಬಳಿಕ ಜಮ್ಮು-ಕಾಶ್ಮೀರದಲ್ಲಿ ವಿಧಾನಸಭೆಯೇ ಇರಲಿಲ್ಲ. ವಿಶೇಷ ಸ್ಥಾನಮಾನ ರದ್ದಾದ ಬಳಿಕ ಜಮ್ಮು-ಕಾಶ್ಮೀರವನ್ನು ವಿಧಾನಸಭೆಯೊಳಗೊಂಡ ಕೇಂದ್ರಾಡಳಿತ ಪ್ರದೇಶವೆಂದೂ, ಲಡಾಕ್ ಪ್ರಾಂತ್ಯವನ್ನು ವಿಧಾನಸಭೆ ಇಲ್ಲದ ಕೇಂದ್ರಾಡಳಿತ ಪ್ರದೇಶವೆಂದು ವರ್ಗಿಕರಿಸಲಾಗಿದೆ.
ಜಮ್ಮು-ಕಾಶ್ಮೀರದಲ್ಲಿ ಈ ಹಿಂದೆ ಇದ್ದಂತೆ ಐದು ಲೋಕಸಭಾ ಕ್ಷೇತ್ರಗಳಿರಲಿದ್ದು, ಐದೂ ಲೋಕಸಭಾ ಕ್ಷೇತ್ರಗಳಲ್ಲೂ ವಿಧಾನಸಭಾ ಕ್ಷೇತ್ರಗಳನ್ನು ಸಮಾನಾಗಿ ಹಂಚಿಕೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ 9 ವಿಧಾನಸಭಾ ಕ್ಷೇತ್ರಗಳನ್ನು ಪರಿಶಿಷ್ಟ ಪಂಗಡದವರಿಗೆ ಮೀಸಲಿರಿಸಲಾಗಿದೆ.
ಜಮ್ಮುವಿನಲ್ಲಿ 43 ವಿಧಾನಸಭಾ ಕ್ಷೇತ್ರಗಳು ಬರಲಿದ್ದು, ಕಾಶ್ಮೀರದಲ್ಲಿ 47 ವಿಧಾನಸಭೆ ಬರಲಿವೆ. ಜಮ್ಮುವಿನಲ್ಲಿ ವಿಧಾನಸಭಾ ಕ್ಷೇತ್ರಗಳ ಸಂಖ್ಯೆಯನ್ನು 37ರಿಂದ 43ಕ್ಕೆ ಹೆಚ್ಚಳ ಮಾಡಲಾಗಿದೆ. ಕಾಶ್ಮೀರಿ ವಲಸಿಗರು ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು-ಕಾಶ್ಮೀರದಿಂದ ವಲಸೆ ಬಂದಿರುವವರಿಗೆ ಪ್ರತ್ಯೇಕ ಶಾಸಕ ಸ್ಥಾನಗಳನ್ನು ಮೀಸಲಿಡುವಂತೆ ಆಯೋಗ ಶಿಫಾರಸ್ಸು ಮಾಡಿದೆ.
ಆದರೆ ವಿಧಾನಸಭಾ ಕ್ಷೇತ್ರಗಳ ವಿಂಗಡಣೆಯ ಸ್ವರೂಪದ ಬಗ್ಗೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಮುಂದಿನ ಚುನಾವಣೆಗಳಲ್ಲಿ ಬಿಜೆಪಿಗೆ ಅನುಕೂಲವಾಗುವಂತೆ ವಿಧಾನಸಭಾ ಕ್ಷೇತ್ರಗಳ ವಿಂಗಡಣೆ ಮಾಡಲಾಗಿದೆ ಎಂದು ಟೀಕಿಸಿವೆ.