ದೇಶದ ಖ್ಯಾತ ಹೃದ್ರೋಗ ಆಸ್ಪತ್ರೆಯಾದ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಸ್ಥಾನದಿಂದ ಡಾ.ಸಿಎನ್ ಮಂಜುನಾಥ್ ಇದೇ ಜುಲೈ 19 ರಂದು ನಿವೃತ್ತಿಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಸೇವೆ ಪರಿಗಣಿಸಿವ ಅವರನ್ನೇ ನಿರ್ದೇಶಕರನ್ನಾಗಿ ಮುಂದುವರೆಸುವಂತೆ ಆಸ್ಪತ್ರೆಯ ಸಿಬ್ಬಂದಿ ಸರ್ಕಾರಕ್ಕೆ ಒತ್ತಾಯಿಸಿ ಪತ್ರ ಬರೆದಿದ್ದಾರೆ. ಅಲ್ಲದೇ, ಪ್ರತಿಭಟನೆ ಮಾಡವ ನಿರ್ಧಾರ ಮಾಡಿದ್ದಾರೆ.
ಡಾ.ಸಿಎನ್ ಮಂಜುನಾಥ್ ಅವರಿಗೆ 65 ವರ್ಷವಾದ ಹಿನ್ನೆಲೆಯಲ್ಲಿ ನಿವೃತ್ತಿಯಾಗುತ್ತಿದ್ದಾರೆ. ಇವರನ್ನೇ ಮುಂದುವರೆಸಬೇಕು ಎಂದು ಜಯದೇವ ಆಸ್ಪತ್ರೆಯ ಸಿಬ್ಬಂದಿಗಳು ಅಭಿಯಾನ ನಡೆಸುತ್ತಿದ್ದಾರೆ. ಈ ಸಂಬಂಧ ಮಂಗಳವಾರ ಒಪಿಡಿಗೆ ಸಮಸ್ಯೆಯಾಗದಂತೆ ಪ್ರತಿಭಟನೆ ನಡೆಸಲು ಸಿಬ್ಬಂದಿ ತೀರ್ಮಾನಿಸಿದ್ದಾರೆ.
ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿರುವ ಜಯದೇವ ಆಸ್ಪತ್ರೆಯ ಸಿಬ್ಬಂದಿ, ಇಂಡಿಯನ್ ಮೆಡಿಕಲ್ ಕೌನ್ಸಿಲ್ ನಿಯಮದ ಪ್ರಕಾರ ಗರಿಷ್ಠ 70 ವರ್ಷದ ವರೆಗೂ ಸೇವೆ ಸಲ್ಲಿಸಬಹುದು. ಸದ್ಯ ಸಿಎನ್ ಮಂಜುನಾಥ್ರಿಗೆ 65 ವರ್ಷ ಮಾತ್ರ ವಯಸ್ಸಾಗಿದೆ. ಹೀಗಾಗಿ ಇನ್ನಷ್ಟು ವರ್ಷ ಅವರನ್ನ ನಿರ್ದೇಶಕರಾಗಿ ಮುಂದುವರೆಸಬೇಕು. ಅವರಿಂದಾಗೇ ಜಯದೇವ ಆಸ್ಪತ್ರೆ ಈ ಮಟ್ಟಕ್ಕೆ ಬೆಳೆದಿದೆ. ಸಿಎನ್ ಮಂಜುನಾಥ್ ಸೇವೆ ಪರಿಗಣಿಸಿ ಅವರನ್ನು ನಿರ್ದೇಶಕ ಸ್ಥಾನದಲ್ಲಿ ಮುಂದುವರೆಸಬೇಕು ಎಂದು ಒತ್ತಾಯಿಸಿದ್ದಾರೆ.
ಆಸ್ಪತ್ರೆಯ ಸಿಬ್ಬಂದಿಗಳೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಜನ ಸಾರ್ವಜನಿಕರೂ ಸಿಎನ್ ಮಂಜುನಾಥ್ ಅವರನ್ನೇ ನಿರ್ದೇಶಕರನ್ನಾಗಿ ಮುಂದುವರೆಸಬೇಕು ಎಂದು ಆಗ್ರಹಿಸುತ್ತಿದ್ದಾರೆ.