ನಾಳೆ ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಯ 4 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ನಡುವೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಪಕ್ಷದಲ್ಲೇ ಬಂಡಾಯದ ಆತಂಕ ಎದುರಾಗಿದೆ. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಹೆಚ್ಡಿಕೆ ವರ್ತನೆ ವಿರುದ್ಧ ಅಸಮಾಧಾನಗೊಂಡಿರುವ ಐವರು ಶಾಸಕರು ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರ ವಿರುದ್ಧ ಅಡ್ಡ ಮತದಾನ ಮಾಡುವ ಆತಂಕ ಕುಮಾರಸ್ವಾಮಿ ಅವರದ್ದು.
ಜೆಡಿಎಸ್ ಭಿನ್ನಮತೀಯ ಶಾಸಕರು: ಚಾಮುಂಡೇಶ್ವರಿ ಕ್ಷೇತ್ರದ ಶಾಸಕ, ಮಾಜಿ ಸಚಿವ ಜಿ ಟಿ ದೇವವೇಗೌಡ, ಅರಸೀಕೆರೆ ಶಾಸಕ ಶಿವಲಿಂಗೇಗೌಡ, ಅರಕಲಗೂಡು ಶಾಸಕ ಎ ಟಿ ರಾಮಸ್ವಾಮಿ, ಗುಬ್ಬಿ ಕ್ಷೇತ್ರದ ಶಾಸಕ, ಮಾಜಿ ಸಚಿವ ಗುಬ್ಬಿ ಶ್ರೀನಿವಾಸ್, ಕೋಲಾರ ಕ್ಷೇತ್ರದ ಶಾಸಕ ಶ್ರೀನಿವಾಸ್ ಗೌಡ.
ಒಂದು ವೇಳೆ ಈ ಐವರು ಶಾಸಕರು ಅಡ್ಡಮತದಾನ ಮಾಡಿದರೆ ಆಗ ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಗೆಲ್ಲುವ ಸಾಧ್ಯತೆಯೇ ಇಲ್ಲ.
ಹೀಗಾಗಿ ತನ್ನ ಶಾಸಕರನ್ನು ನಾಳೆ ಮತದಾನ ಆರಂಭ ಆಗುವವರೆಗೂ ರೆಸಾರ್ಟ್ ಕರೆದುಕೊಂಡು ಹೋಗಲು ಜೆಡಿಎಸ್ ಯೋಚನೆ ಮಾಡುತ್ತಿದೆ.
ಜೆಡಿಎಸ್ ಬಳಿ ತನ್ನ ಒಬ್ಬ ಅಭ್ಯರ್ಥಿಯನ್ನೂ ಗೆಲ್ಲಿಸಿಕೊಳ್ಳಲು ಬಹುಮತ ಇಲ್ಲ. ಒಬ್ಬ ರಾಜ್ಯಸಭಾ ಅಭ್ಯರ್ಥಿ ಆಯ್ಕೆಗೆ 46 ಮತಗಳು ಅಗತ್ಯ. ಜೆಡಿಎಸ್ ಬಳಿ ಇರುವುದು 32 ಶಾಸಕರ ಮತಗಳಷ್ಟೇ. ಐವರು ಶಾಸಕರು ಅಡ್ಡಮತದಾನ ಮಾಡಿದರೆ ಆಗ ಜೆಡಿಎಸ್ ಅಭ್ಯರ್ಥಿಗೆ ಕೇವಲ 27 ಮತಗಳು ಸಿಗುತ್ತವೆ, ಕುಪೇಂದ್ರ ರೆಡ್ಡಿ ಸೋಲ್ತಾರೆ.
ಆದರೆ ಈ ಅಡ್ಡಮತದಾನ ಮಾಡುವ ಶಾಸಕರು ಕಾಂಗ್ರೆಸ್ಗೇ ಮತ ಹಾಕಬೇಕೆಂದೇನಿಲ್ಲ, ಶಾಸಕ ಜಿ ಟಿ ದೇವೇಗೌಡ ಅವರನ್ನು ಸೆಳೆಯಲು ಕಾಂಗ್ರೆಸ್ ಜೊತೆಗೆ ಬಿಜೆಪಿಯೂ ಕಸರತ್ತು ಮಾಡುತ್ತಿದೆ. ಶಿವಲಿಂಗೇಗೌಡ ಅವರ ವಿರುದ್ಧ ಸ್ವತಃ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು, ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ರೇವಣ್ಣ ಬಹಿರಂಗ ವಾಗ್ದಾಳಿ ನಡೆಸಿದ್ದಾರೆ. ಗುಬ್ಬಿ ಶ್ರೀನಿವಾಸ್ ಅವರು ಕುಮಾರಸ್ವಾಮಿ ವಿರುದ್ಧ ನಿರಂತರವಾಗಿ ಸರಣಿ ಆರೋಪಗಳನ್ನು ಮಾಡುತ್ತಿದ್ದಾರೆ. ಶ್ರೀನಿವಾಸಗೌಡ ಅವರು ಕಳೆದ ವರ್ಷವೇ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಭೇಟಿ ಆಗಿ ಮಾತುಕತೆ ನಡೆಸಿದ್ದಾರೆ. ಈ ಮೂವರು ಕಾಂಗ್ರೆಸ್ ಸೇರಬಹುದು ಎಂಬ ಮಾತುಗಳಿವೆ.
ಒಂದು ವೇಳೆ ಅಡ್ಡಮತದಾನ ಮಾಡದೇ ತಟಸ್ಥರಾಗಿ ಉಳಿದರೂ ಅದರ ನಷ್ಟ ಜೆಡಿಎಸ್ಗೆ ಹೊರತು ಕಾಂಗ್ರೆಸ್ ಅಥವಾ ಬಿಜೆಪಿಗಲ್ಲ. ಅಡ್ಡ ಮತದಾನ ಅಥವಾ ತಟಸ್ಥರಾಗಿ ಉಳಿದರೆ ಆಗ ಜೆಡಿಎಸ್ ಬಲ 32ರಿಂದ 27ಕ್ಕೆ ಇಳಿಯುತ್ತದೆ. ಆಗ ಜೆಡಿಎಸ್ ರಾಜ್ಯಸಭಾ ಚುನಾವಣೆಯಲ್ಲಿ ಸೋಲುತ್ತದೆ.
ಅಡ್ಡ ಮತದಾನ ಆಗುತ್ತಾ..?
ಆದರೆ ರಾಜ್ಯಸಭಾ ಚುನಾವಣೆ ವೇಳೆ ಮೂರು ಪಕ್ಷಗಳು ತಮ್ಮ ಶಾಸಕರಿಗೆ ಪಕ್ಷದ ಅಧಿಕೃತ ಪರವಾಗಿಯೇ ಮತ ಹಾಕುವಂತೆ ವಿಪ್ ಜಾರಿ ಮಾಡುತ್ತವೆ.
ರಾಜ್ಯಸಭಾ ಚುನಾವಣೆಯ ಮತದಾನದ ವೇಳೆ ಮೂರು ಪಕ್ಷಗಳು ತಮ್ಮ ಚುನಾವಣಾ ಏಜೆಂಟ್ರನ್ನು ಮತ ಕೇಂದ್ರದಲ್ಲಿ ನೇಮಿಸಿರುತ್ತವೆ. ಮತ ಪೆಟ್ಟಿಗೆಯಲ್ಲಿ ಮತಪತ್ರವನ್ನು ಹಾಕುವುದಕ್ಕೂ ಮೊದಲು ತಾವು ಯಾರಿಗೆ ಮತ ಹಾಕುತ್ತಿದ್ದೇವೆ ಎಂಬುದನ್ನು ಆಯಾಯ ಪಕ್ಷದ ಶಾಸಕರು ಆಯಾಯ ಪಕ್ಷದ ಚುನಾವಣಾ ಏಜೆಂಟ್ಗೆ ತೋರಿಸಲೇಬೇಕಾಗುತ್ತದೆ. ಅಂದರೆ ತಮ್ಮ ಶಾಸಕರು ರಾಜ್ಯಸಭಾ ಚುನಾವಣೆಯಲ್ಲಿ ಯಾವ ಅಭ್ಯರ್ಥಿಗೆ ಮೊದಲ ಮತ್ತು ಎರಡನೇ ಮಹತ್ವದ ಮತ ಹಾಕಿದ್ದಾರೆ ಎನ್ನುವುದು ಆ ಪಕ್ಷ ತಿಳಿಯುತ್ತದೆ.
ಒಂದು ವೇಳೆ ಪಕ್ಷ ನಿರ್ದೇಶಿಸಿದ ಅಭ್ಯರ್ಥಿ ಬಿಟ್ಟು ಉಳಿದವರಿಗೆ ಮತ ಹಾಕಿದ್ದರೆ ಆ ಚುನಾವಣಾ ಏಜೆಂಟ್ ವಿಪ್ ಉಲ್ಲಂಘಿಸಿದ ತನ್ನ ಪಕ್ಷದ ಅಂತಹ ಅಭ್ಯರ್ಥಿಯ ಮತವನ್ನು ಪರಿಗಣಿಸದಂತೆ ಚುನಾವಣಾಧಿಕಾರಿಗೆ ಮನವಿ ಮಾಡಲು ಅಥವಾ ಮತ ಪೆಟ್ಟಿಗೆಯಲ್ಲಿ ಆ ಮತಪತ್ರವನ್ನು ಹಿಂಪಡೆಯಲು ಅವಕಾಶ ಇರುತ್ತದೆ.