ನಿರೀಕ್ಷಿತ ಬೆಳವಣಿಗೆಯಲ್ಲಿ ಜೆಡಿಎಸ್ ಮಾಜಿ ಶಾಸಕ ವೈ ಎಸ್ ವಿ ದತ್ತಾ ಕಾಂಗ್ರೆಸ್ ಸೇರುವುದಾಗಿ ಸ್ಪಷ್ಟನೆ ನೀಡಿದ್ದಾರೆ. ವೈಎಸ್ವಿ ದತ್ತಾ ಅವರು ಪರಿಚಿತರೊಬ್ಬರಿಗೆ ಫೋನ್ ನಲ್ಲಿ ಮಾತನಾಡುವಾಗ ಆಡಿದ್ದ ಕೆಲ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅದರಲ್ಲಿ ತಾವು ಮುಂದಿನ ತಿಂಗಳು ಕಾಂಗ್ರೆಸ್ ಸೇರುತ್ತಿರುವುದಾಗಿಯೂ, ನನ್ಮಗಂದ್ ನಾನು ಮಂತ್ರಿ ಆಗಿಲ್ಲ ಅಂದ್ರೆ ನನ್ನ ಹೆಸರು ದತ್ತಾನೇ ಅಲ್ಲ ಬರೆದಿಟ್ಟುಕೊ.. ಮಂತ್ರಿಯಾಗುವ ಯೋಗ್ಯತೆ ನನಗೆ ಇದೆ. ಪಕ್ಷ ಸೇರಲು ಸಿದ್ದರಾಮಣ್ಣ ಆಹ್ವಾನ ನೀಡಿದ್ದಾರೆ. ಮಂತ್ರಿ ಮಾಡುವ ಭರವಸೆಯನ್ನು ನೀಡಿದ್ದಾರೆ ಎಂದು ಪರಿಚಿತರೊಂದಿಗೆ ವೈ ಎಸ್ ವಿ ದತ್ತಾ ಹೇಳಿಕೊಂಡಿದ್ದರು.
ಈ ವೈರಲ್ ಆಡಿಯೋ ಬಗ್ಗೆ ಸ್ಪಷ್ಟನೆ ನೀಡಿರುವ ವೈಎಸ್ ವಿ ದತ್ತಾ, ಹೌದು ಆ ಆಡಿಯೋದಲ್ಲಿರುವ ಧ್ವನಿ ನನ್ನದೇ.. ಅದು ನನ್ನದೇ ಮಾತು. ಶೀಘ್ರವೇ ಕಾಂಗ್ರೆಸ್ ಸೇರಲಿದ್ದೇನೆ.. ಮಂತ್ರಿಯಾಗುವ ಯೋಗ್ಯತೆ ಇದೆ ಎಂದಿದ್ದೇನೆ. ಮಂತ್ರಿ ಆಗುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ ಎಂದಿದ್ದಾರೆ. ನಾನು ಹೇಳಿರುವುದು ಜನಾಭಿಪ್ರಾಯ ಅಷ್ಟೇ ಎಂದು ವೈಎಸ್ವಿ ದತ್ತಾ ಸ್ಪಷ್ಟಪಡಿಸಿದ್ದಾರೆ.
ಕಳೆದ ಕೆಲ ತಿಂಗಳಿಂದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕಾರ್ಯವೈಖರಿ ಮತ್ತು ಸೈದ್ಧಾಂತಿಕ ತಿಕ್ಕಾಟಗಳ ಕಾರಣ ಜೆಡಿಎಸ್ ನಿಂದ ವೈಎಸ್ವಿ ದತ್ತಾ ಅಂತರ ಕಾಯ್ದುಕೊಂಡಿದ್ದರು. ಕಾಂಗ್ರೆಸ್ ಸೇರುವ ಸುಳಿವು ನೀಡಿದ್ದರು.