ದಲಿತ ನಾಯಕ ಮತ್ತು ಗುಜರಾತ್ ಶಾಸಕ ಜಿಗ್ನೇಶ್ ಮೆವಾನಿಯವರನ್ನು ಬಂಧಿಸಲಾಗಿದೆ. ರಾತ್ರೋರಾತ್ರಿ ಅಸ್ಸಾಂ ರಾಜ್ಯದ ಪೊಲೀಸರು ಮೆವಾನಿಯವರನ್ನು ಬಂಧಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾಡಿರುವ ಟ್ವೀಟೇ ಮೆವಾನಿ ಬಂಧನಕ್ಕೆ ಕಾರಣ ಎನ್ನಲಾಗಿದೆ. `ಗೋಡ್ಸೆಯನ್ನು ದೇವರು ಎಂದು ಪೂಜಿಸುವ ಪ್ರಧಾನಿ ನರೇಂದ್ರ ಮೋದಿ ಗುಜರಾತ್ನಲ್ಲಿ ಶಾಂತಿ-ಸೌಹಾರ್ದತೆಗಾಗಿ ಕರೆ ನೀಡಬೇಕು’ ಎಂದು ಮೆವಾನಿ ಟ್ವೀಟಿಸಿದ್ದರು.
ಇತ್ತೀಚೆಗೆ ಗುಜರಾತ್ನ ಹಿಮ್ಮತ್ನಗರ್, ಖಂಬಾತ್, ವರ್ವಾಲ್ನಲ್ಲಿ ನಡೆದಿರುವ ಹಿಂಸಾಚಾರವನ್ನು ಟ್ವೀಟ್ನಲ್ಲಿ ಉಲ್ಲೇಖಿಸಿದ್ದ ಮೆವಾನಿ `ಏಪ್ರಿಲ್ 20ರಂದು ಗುಜರಾತ್ಗೆ ಬರುತ್ತಿರುವ ಮೋದಿಗೆ ಶಾಂತಿ-ಸೌಹಾರ್ದತೆ ಕಾಪಾಡುವಂತೆ ಕರೆ ನೀಡುವಂತೆ ಮನವಿ ಮಾಡಿದ್ದಾಗಿ’ ಏಪ್ರಿಲ್ 18ರಂದು ಟ್ವೀಟಿಸಿದ್ದರು.
ಈ ಟ್ವೀಟ್ ವಿರುದ್ಧ ಅಸ್ಸಾಂನ ಕೊಕ್ರಾಝಾರ್ ಜಿಲ್ಲೆಯ ಅನುಪ್ ಕುಮಾರ್ ದೇ ಎಂಬವರು ಅಸ್ಸಾಂ ಪೊಲೀಸರಿಗೆ ದೂರು ನೀಡಿದ್ದರು. ಕ್ರಿಮಿನಲ್ ಒಳಸಂಚು, ಸಮುದಾಯಗಳ ನಡುವೆ ದ್ವೇಷ ಸೃಷ್ಟಿಸುವ ಉದ್ದೇಶ, ಧಾರ್ಮಿಕ ಸ್ಥಳಗಳಿಗೆ ಧಕ್ಕೆ ತರುವ ಮೂಲಕ ಆ ಧರ್ಮಕ್ಕೆ ಅವಮಾನ, ಶಾಂತಿಭAಗ ಮಾಡುವ ಸಲುವಾಗಿ ಉದ್ದೇಶಪೂರ್ವಕ ಅವಮಾನ ಪ್ರಕರಣಗಳನ್ನು ದಾಖಲಿಸಲಾಗಿದೆ.
ಗುಜರಾತ್ನ ಅಹಮದಾಬಾದ್ನಿಂದ ಮೆವಾನಿಯವರನ್ನು ಅಸ್ಸಾಂನ ಗುವಾಹಟಿಗೆ ಕರೆದೊಯ್ಯಲಾಗುತ್ತಿದೆ.
ವಡಗಾಮ್ ಕ್ಷೇತ್ರದ ಶಾಸಕರಾಗಿರುವ ಮೆವಾನಿ ದಲಿತ ಹೋರಾಟಗಾರ. ಇವತ್ತು ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಗೆದ್ದಿದ್ದರೂ ಕಾಂಗ್ರೆಸ್ಗೆ ಬೆಂಬಲ ಸೂಚಿಸಿದ್ದರು.
ಗುಜರಾತ್ ವಿಧಾನಸಭಾ ಚುನಾವಣೆ ಇದೇ ಡಿಸೆಂಬರ್ನಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ಮೆವಾನಿ ಬಂಧನ ರಾಜಕೀಯ ತಿರುವು ಪಡೆದುಕೊಳ್ಳುವುದು ನಿಶ್ಚಿತ.