ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಪತ್ನಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅತ್ಯಂತ ದುಬಾರಿ ಮೊತ್ತದ ಉಡುಗೊರೆಯನ್ನು ನೀಡಿದ್ದಾರೆ. ಜೋ ಬಿಡೆನ್ ಪತ್ನಿ ಜಿಲ್ ಬಿಡೆನ್ಗೆ ಪ್ರಧಾನಿ ಮೋದಿ ಕೊಟ್ಟಿರುವ ಉಡುಗೊರೆಯ ಮೌಲ್ಯ ಬರೋಬ್ಬರೀ 17 ಲಕ್ಷ ರೂಪಾಯಿ.
2023ರಲ್ಲಿ ವಿಶ್ವದ ಇತರೆ ರಾಷ್ಟ್ರಗಳ ನಾಯಕರು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮತ್ತು ಅವರ ಕುಟುಂಬಕ್ಕೆ ನೀಡಿರುವ ಅತ್ಯಂತ ದುಬಾರಿ ಉಡುಗೊರೆಗಳಲ್ಲಿ ಪ್ರಧಾನಿ ಮೋದಿ ಕೊಟ್ಟಿರುವ ಉಡುಗೊರೆಯೇ ದುಬಾರಿಯದ್ದು.
2023ರಲ್ಲಿ ಪ್ರಧಾನಿ ಮೋದಿಯವರು ಜಿಲ್ ಬಿಡೆನ್ ಅವರಿಗೆ 7.5 ಕ್ಯಾರೆಟ್ ಮೌಲ್ಯದ ವಜ್ರವನ್ನು ಉಡುಗೊರೆಯಾಗಿ ನೀಡಿದ್ದಾರೆ.
480 ಡಾಲರ್ಗಿಂತಲೂ ಅಧಿಕ ಮೌಲ್ಯದ ಉಡುಗೊರೆಯನ್ನು ಸ್ವೀಕರಿಸಿದ್ದರೆ ಅಂತಹ ಉಡುಗೊರೆಗಳ ಬಗ್ಗೆ ಅಮೆರಿಕದಲ್ಲಿನ ಕಾರ್ಯಾಂಗದಲ್ಲಿರುವ ಅಧಿಕಾರಿಗಳು ಘೋಷಣೆ ಮಾಡಿಕೊಳ್ಳುವುದು ಕಡ್ಡಾಯ. ಈ ಹಿನ್ನೆಲೆಯಲ್ಲಿ 2023ರಲ್ಲಿ ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಮತ್ತು ಅವರ ಕುಟುಂಬಕ್ಕೆ ವಿದೇಶಿ ಗಣ್ಯರು ನೀಡಿರುವ ಉಡುಗೊರೆಗಳ ಮಾಹಿತಿಯನ್ನು ಪ್ರಕಟಿಸಲಾಗಿದೆ.
ಹೀಗೆ ನೀಡಲಾಗಿರುವ ಉಡುಗೊರೆಗಳಲ್ಲಿ ಪ್ರಧಾನಿ ಮೋದಿಯವರು ಜಿಲ್ ಬಿಡೆನ್ ಅವರಿಗೆ ಕೊಟ್ಟಿರುವ 20 ಸಾವಿರ ಡಾಲರ್ ಮೌಲ್ಯದ ಉಡುಗೊರೆಯೇ ದುಬಾರಿಯಾಗಿದೆ.
ಜಿಲ್ ಬಿಡೆನ್ ಅವರಿಗೆ ಉಕ್ರೇನ್ ರಾಯಭಾರಿ 14,063 ಡಾಲರ್ ಮೌಲ್ಯದ ಉಡುಗೊರೆ, ಈಜಿಪ್ಟ್ ಅಧ್ಯಕ್ಷರು 4,510 ಡಾಲರ್ ಮೌಲ್ಯದ ಬ್ರ್ಯಾಸೆಲೆಟ್ ಮತ್ತು ಆಲ್ಬಮ್ನ್ನು ಉಡುಗೊರೆಯನ್ನಾಗಿ ನೀಡಿದ್ದಾರೆ.
ದಕ್ಷಿಣ ಕೊರಿಯಾದಲ್ಲಿ ಈಗ ಪದಚ್ಯುತಗೊಂಡಿರುವ ಅಧ್ಯಕ್ಷ ಯೂನ್ ಸುಕ್ ಯಿಯೋಲ್ ಅವರು 7,100 ಡಾಲರ್ ಮೌಲ್ಯದ ಉಡುಗೊರೆ, ಬ್ರುನೈನ ಸುಲ್ತಾನ 3,330 ಡಾಲರ್ ಮೌಲ್ಯದ ಬೆಳ್ಳಿ ತಟ್ಟೆ, ಇಸ್ರೇಲ್ ಅಧ್ಯಕ್ಷರು 3,160 ಡಾಲರ್ ಮೌಲ್ಯದ ಬೆಳ್ಳಿ ತಟ್ಟೆಯನ್ನು ಅಧ್ಯಕ್ಷ ಜೋ ಬಿಡೆನ್ ಅವರಿಗೆ ಉಡುಗೊರೆಯನ್ನಾಗಿ ನೀಡಿದ್ದಾರೆ.
ADVERTISEMENT
ADVERTISEMENT