ಇಂಗ್ಲೆಂಡ್‌ನ ಟೆಸ್ಟ್ ಕ್ರಿಕೆಟ್ ನಾಯಕತ್ವಕ್ಕೆ ಜೋ ರೂಟ್ ವಿದಾಯ ಹೇಳಿದ್ದಾರೆ. ತಮ್ಮ ನಿರ್ಧಾರ ಪ್ರಕಟಿಸಿರುವ ಜೋ ರೂಟ್ ಮುಂದಿನ ನಾಯಕನಿಗೆ ಶುಭ ಕೋರಿದ್ದಾರೆ.
ಇತ್ತೀಚಿಗೆ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್ ಟೆಸ್ಟ್ ಸರಣಿ ಸೋತ ನಂತರ ಜೋ ರೂಟ್ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಜೋ ರೂಟ್ ನಾಯಕತ್ವದಲ್ಲಿ ಇಂಗ್ಲೆಂಡ್ ಟೀಂ 0-4 ಅಂತರದಲ್ಲಿ ಹೀನಾಯವಾಗಿ ಸೋತಿತ್ತು. ನಂತರ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಟೆಸ್ಟ್ ಸರಣಿಯನ್ನು 0-1 ರಿಂದ ಕಳೆದುಕೊಂಡಿತು. ಸತತ ಸೋಲಿನಿಂದ ಒತ್ತಡದಲ್ಲಿದ್ದ ಜೋ ರೂಟ್ ಶುಕ್ರವಾರ ದಿಢೀರನೆ ರಾಜೀನಾಮೆ ಘೋಷಿಸಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
ತಮ್ಮ ನಾಯಕತ್ವದಲ್ಲಿ 27 ಟೆಸ್ಟ್ ಪಂದ್ಯಗಳನ್ನ ಗೆದ್ದಿರುವ ಜೋ ರೂಟ್ ಅತ್ಯಂತ ಯಶಸ್ವಿ ಇಂಗ್ಲೆಂಡ್ ಟೆಸ್ಟ್ ನಾಯಕರಾಗಿದ್ದಾರೆ. “ಕೆರಿಬಿಯನ್ ಪ್ರವಾಸದಿಂದ ಹಿಂದಿರುಗಿದ ನಂತರ ನಾನು ಈ ಬಗ್ಗೆ ನಿರ್ಧರಿಸಲು ಸಮಯ ಸಿಕ್ಕಿತು. ನಾನು ಇಂಗ್ಲೆಂಡ್ ಪುರುಷರ ಟೆಸ್ಟ್ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದ್ದೇನೆ. ಇದು ನನ್ನ ವೃತ್ತಿಜೀವನದಲ್ಲಿ ನಾನು ತೆಗೆದುಕೊಳ್ಳಬೇಕಾದ ಅತ್ಯಂತ ಸವಾಲಿನ ನಿರ್ಧಾರವಾಗಿದೆ. ಆದರೆ ನನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ಚರ್ಚಿಸಿ ನಿರ್ಧರಿಸಿದ್ದೇನೆ. ಇದೇ ನನಗೆ ಸರಿಯಾದ ಸಮಯ ಅನಿಸಿದೆ. ”ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ ಜೋ ರೂಟ್ ಹೇಳಿದ್ದಾರೆ.
ನನ್ನ ದೇಶಕ್ಕೆ ನಾಯಕತ್ವ ವಹಿಸಿದ್ದಕ್ಕಾಗಿ ನಾನು ಅಪಾರ ಹೆಮ್ಮೆಪಡುತ್ತೇನೆ ಮತ್ತು ಕಳೆದ ಐದು ವರ್ಷಗಳನ್ನು ಅಗಾಧ ಹೆಮ್ಮೆಯಿಂದ ಹಿಂತಿರುಗಿ ನೋಡುತ್ತೇನೆ. ಇಂಗ್ಲೆಂಡ್ ಕ್ರಿಕೆಟ್ ಅನ್ನು ಉತ್ತುಂಗಕ್ಕೇರಿಸುವ ನಿಟ್ಟಿನಲ್ಲಿ ಹಲವು ವರ್ಷಗಳ ಕಾಲ ನಾಯಕನಾಗಿ ಸಲ್ಲಿಸಿರುವ ಸೇವೆಯಿಂದ ನನಗೆ ಹೆಮ್ಮೆ ಇದೆ” ಎಂದು ಜೋ ರೂಟ್ ಭಾವುಕ ನುಡಿಗಳನ್ನಾಡಿದ್ದಾರೆ.
ರೂಟ್ ಈಗಾಗಲೇ ಇಂಗ್ಲೆಂಡ್‌ನ ಸಾರ್ವಕಾಲಿಕ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿದ ಕುಕ್ ನಂತರ ಎರಡನೇ ಸ್ಥಾನದಲ್ಲಿದ್ದಾರೆ ಮತ್ತು ನಾಯಕನಾಗಿ 14 ಶತಕಗಳನ್ನು ಗಳಿಸಿದ್ದಾರೆ. ನಾಯಕನಾಗಿ ಅವರು 5,295 ರನ್‌ಗಳಿಸಿದ್ದು ಈ ಮೊತ್ತವು ಇದುವರೆಗೆ ಇಂಗ್ಲೆಂಡ್ ನಾಯಕರು ಗಳಿಸಿರುವ ರನ್ ಗಳಿಗಿಂತ ಅಧಿಕವಾಗಿದೆ. ಈ ಮೂಲಕ ಜೋ ರೂಟ್ ಅವರು ಗ್ರೇಮ್ ಸ್ಮಿತ್, ಅಲನ್ ಬಾರ್ಡರ್, ರಿಕಿ ಪಾಂಟಿಂಗ್ ಮತ್ತು ವಿರಾಟ್ ಕೊಹ್ಲಿಯ ನಂತರ ಸಾರ್ವಕಾಲಿಕ ಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿದ್ದಾರೆ.
ನಾಯಕತ್ವದಿಂದ ಕೆಳಗಿಳಿದಿರುವ ಜೋ ರೂಟ್ ತನ್ನ ದೇಶಕ್ಕಾಗಿ ಆಡಲು ಇಚ್ಚಿಸಿದ್ದಾರೆ. ಇಂಗ್ಲೆಂಡ್ ಮುಂದಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಜೂನ್‌ನಲ್ಲಿ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಲಿದೆ.