ಮಂಗಳೂರು: ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನನ್ನು ಕಣ್ತುಂಬಿಕೊಳ್ಳಲು ಬಹಳ ಕಾತುರದಿಂದ ಕಾಯುತ್ತಿದ್ದರು. ಇದೀಗ ಕೋಟ್ಯಾಂತರ ರಾಮ ಭಕ್ತರ ಕನಸು ನೆರವೇರಿದ್ದು, ಶುಭ ಅಭಿಜಿತ್ ಮುಹೂರ್ತದಲ್ಲಿ ಪ್ರಭು ಶ್ರೀರಾಮನು ಬಾಲ ರಾಮನಾಗಿ ಅಯೋಧ್ಯೆಯ ರಾಮ ಮಂದಿರದ ಗರ್ಭಗುಡಿಯಲ್ಲಿ ವಿರಾಜಮಾನನಾಗಿದ್ದಾನೆ. ಈ ವಿಶೇಷ ಸಂದರ್ಭದಲ್ಲಿ ಕೇವಲ ಅಯೋಧ್ಯೆಯಲ್ಲಿ ಮಾತ್ರವಲ್ಲದೆ ದೇಶದೆಲ್ಲೆಡೆ ಸಂಭ್ರಮ ಬಹಳ ಜೋರಾಗಿಯೇ ಇತ್ತು. ಹೌದು ದೇಶದ ಪ್ರತಿಯೊಂದು ದೇವಾಲಯ, ರಾಮ ಮಂದಿರಗಳು ಹಾಗೇನೆ ಭಜನ ಮಂಡಳಿಗಳಲ್ಲಿ ಶ್ರೀರಾಮನ ಪೂಜೆ, ರಾಮೋತ್ಸವ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾರಿಂಜೇಶ್ವರ ದೇವಳದಲ್ಲಿಯೂ ಕೂಡ ರಾಮೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು, ಆ ವೇಳೆಯಲ್ಲಿ ಎಲ್ಲಿ ರಾಮನೋ ಅಲ್ಲಿ ಹನುಮ ಎಂಬಂತೆ, ಅಲ್ಲಿ ನಡೆದ ರಾಮೋತ್ಸವ ಕಾರ್ಯಕ್ರಮದಲ್ಲಿ ವಾನರ ಸೈನ್ಯವೂ ಕೂಡಾ ಭಾಗಿಯಾಗಿವೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರ ಮನ ಗೆದ್ದಿದೆ.
ಈ ವಿಡಿಯೋವನ್ನು @trollbogra ಎಂಬ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದ್ದು, ʼಶ್ರೀ ಕ್ಷೇತ್ರ ಕಾರಿಂಜೇಶ್ವರ ದೇವಸ್ಥಾನದಲ್ಲಿ ನಡೆದ ರಾಮೋತ್ಸವದಲ್ಲಿ ಭಾಗಿಯಾದ ರಾಮದಾಸರುʼ ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವಿಡಿಯೋದಲ್ಲಿ ಎಲ್ಲಿ ರಾಮನೋ ಅಲ್ಲಿ ಹನುಮ ಎಂಬಂತೆ ಕಾರಿಂಜೇಶ್ವರ ದೇವಾಲಯದಲ್ಲಿ ನಡೆದಂತಹ ರಾಮೋತ್ಸವ ಕಾರ್ಯಕ್ರಮದಲ್ಲಿ ವಾನರ ಸೈನ್ಯವೂ ಬಹಳ ಸಂಭ್ರಮದಿಂದ ಭಾಗಿಯಾಗಿರುವ ದೃಶ್ಯವನ್ನು ಕಾಣಬಹುದು.