ವಿಶ್ಲೇಷಣೆ: ಲತಾ ಪುಟ್ಟಸ್ವಾಮಿ
ಕರ್ನಾಟಕದಲ್ಲಿ ಪ್ರವಾಹ ಮಳೆಯಾಗುತ್ತಿದೆ. ಕರಾವಳಿಯ ಮೂರು ಜಿಲ್ಲೆಗಳು ಮತ್ತು ಮಲೆನಾಡು ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗುತ್ತಿದೆ. ಮಲೆನಾಡು ಮತ್ತು ಕರಾವಳಿ ಜಿಲ್ಲೆಯ ಹಲವು ಕಡೆಗಳಲ್ಲಿ ಭೂಕುಸಿತ, ಬೆಳೆನಷ್ಟವಾಗಿದೆ. ರಸ್ತೆ ಮತ್ತು ರೈಲು ಸಂಪರ್ಕಕ್ಕೆ ಅಡ್ಡಿಯಾಗಿದೆ.
ಪ್ರವಾಹ ಅಪ್ಪಳಿಸಿರುವ ಜಿಲ್ಲೆಗಳಿಗೆ ಇವತ್ತು ಬಿಜೆಪಿ ತಂಡ ಪ್ರವಾಹ ಅಧ್ಯಯನಕ್ಕಾಗಿ ಭೇಟಿ ನೀಡಿ ಪ್ರವಾಹ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಲಿದೆ.
ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಶಾಸಕ ಆರಗ ಜ್ಞಾನೇಂದ್ರ, ಡಾ.ಸಿ.ಎನ್.ಅಶ್ವತ್ಥ್ ನಾರಾಯಣ, ಮಾಜಿ ಸಚಿವ ಬಿ.ಶ್ರೀರಾಮುಲು, ವಿಧಾನಪರಿಷತ್ನಲ್ಲಿ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್ ನೇತೃತ್ವದ ತಂಡಗಳು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿದೆ.
ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದ ತಂಡ ದಕ್ಷಿಣ ಕನ್ನಡ ಮತ್ತು ಬೆಳಗಾವಿ ಜಿಲ್ಲೆಗೆ, ಶಾಸಕ ಆರಗ ಜ್ಞಾನೇಂದ್ರ ನೇತೃತ್ವದ ತಂಡ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದೆ. ಮಾಜಿ ಡಿಸಿಎಂ ಅಶ್ವತ್ಥ್ ನಾರಾಯಣ ನೇತೃತ್ವದ ತಂಡ ಕೊಡಗು ಮತ್ತು ಉಡುಪಿ ಜಿಲ್ಲೆಗಳಲ್ಲಿ ಪರಿಶೀಲನೆ ನಡೆಸಲಿದೆ.
ಛಲವಾದಿ ನಾರಾಯಣಸ್ವಾಮಿ ನೇತೃತ್ವದ ತಂಡ ರಾಯಚೂರು, ಯಾದಗಿರಿ ಜಿಲ್ಲೆಗಳಿಗೆ, ಅರವಿಂದ್ ಬೆಲ್ಲದ್ ನೇತೃತ್ವದ ತಂಡ ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ, ಶ್ರೀರಾಮುಲು ನೇತೃತ್ವದ ತಂಡ ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಗಳಿಗೆ ಭೇಟಿ ನೀಡಲಿದೆ. ಶ್ರೀರಾಮುಲು ನೇತೃತ್ವದ ತಂಡದಲ್ಲಿ ಶಾಸಕ ಜನಾರ್ದನ ರೆಡ್ಡಿಯೂ ಇರಲಿರುವುದು ವಿಶೇಷ.
ಬಿಜೆಪಿ ಪ್ರವಾಹ ಅಧ್ಯಯನದಿಂದ ಯಾರಿಗೆ ಪ್ರಯೋಜನ..?
ವಿಧಾನ ಮಂಡಲ ಅಧಿವೇಶನದಲ್ಲಿ ವಾಲ್ಮೀಕಿ ಹಗರಣ ಮತ್ತು ಮುಡಾ ಹಗರಣದ ಹಿಂದೆ ಬಿದ್ದಿದ್ದ ಬಿಜೆಪಿ ಸದನದಲ್ಲಿ ಪ್ರವಾಹ ಕುರಿತಾದ ಚರ್ಚೆಯನ್ನೇ ಮರೆತಿತ್ತು. ಆಡಳಿತ ಪಕ್ಷದ ಶಾಸಕರೇ ಪ್ರವಾಹದ ಬಗ್ಗೆ ಸರ್ಕಾರಕ್ಕೆ ಪ್ರಶ್ನೆ ಕೇಳಿ ವಿಪಕ್ಷ ಬಿಜೆಪಿಯನ್ನು ಮುಜುಗರಕ್ಕೀಡು ಮಾಡಿದ್ದರು.
ವಾಲ್ಮೀಕಿ ಹಗರಣದ ಚರ್ಚೆ ಬಳಿಕ ಪ್ರವಾಹದ ಬಗ್ಗೆ ಪ್ರಶ್ನೆ ಕೇಳಬೇಕಿದ್ದ ಬಿಜೆಪಿ ಸತತ 2 ದಿನವೂ ಪ್ರತಿಭಟನೆ ಮತ್ತು ಧರಣಿಯಲ್ಲೇ ಸದನದಲ್ಲಿ ಕಾಲ ಕಳೆಯಿತು. ಇದು ಕಾಂಗ್ರೆಸ್ ನ ಕೈಗೆ ಸಿಕ್ಕ ಹೊಸ ಅಸ್ತ್ರವಾಯ್ತು.
ವಿರೋಧ ಪಕ್ಷವಾಗಿ ಬಿಜೆಪಿ ಮತ್ತು ಜೆಡಿಎಸ್ ಪ್ರವಾಹದ ಬಗ್ಗೆ ಯಾಕೆ ಚರ್ಚೆ ಮಾಡಲಿಲ್ಲ ಎಂದು ಆಡಳಿತ ಪಕ್ಷ ಕಾಂಗ್ರೆಸ್ಸೇ ಪ್ರಶ್ನೆ ಹಾಕಿತು. ಇತ್ತ ಅಧಿವೇಶನ ಮುಗಿದ ಬಳಿಕ ಬಿಜೆಪಿ ಮಾಜಿ ಶಾಸಕ ಅರವಿಂದ್ ಲಿಂಬಾವಳಿ ಕೂಡ ಪ್ರವಾಹದ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡದ ಸ್ವಪಕ್ಷ ಬಿಜೆಪಿಯನ್ನೇ ಕಟುವಾಗಿ ಟೀಕಿಸಿದ್ದರು. ವಿರೋಧ ಪಕ್ಷದ ನಾಯಕ ಆರ್ .ಅಶೋಕ್ ಮತ್ತು ಶಾಸಕರೂ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅಸಮರ್ಥರಾಗಿದ್ದಾರೆ ಎಂದು ಲಿಂಬಾವಳಿ ಗಂಭೀರ ಆರೋಪ ಮಾಡಿದ್ದರು.
ವಿರೋಧ ಪಕ್ಷವಾಗಿ ಬಿಜೆಪಿ ಪ್ರವಾಹ ಅಧ್ಯಯನ ಮಾಡುತ್ತಿರುವುದು ಒಳ್ಳೆಯ ಕೆಲ್ಸ . ಆದ್ರೆ ಬಿಜೆಪಿಯ ಈ ಪ್ರವಾಹ ಅಧ್ಯಯನದಿಂದ ಕರ್ನಾಟಕದ ಜನತೆಗೆ ಏನಾದ್ರೂ ಪ್ರಯೋಜನವಾಗುತ್ತಾ..?
ಪ್ರವಾಹ ಅಧ್ಯಯನದ ಬಳಿಕ ವಿಪಕ್ಷ ಬಿಜೆಪಿ ವರದಿ ಸಲ್ಲಿಸುವುದು ರಾಜ್ಯಪಾಲರಿಗೆ. ಪ್ರವಾಹ ಪರಿಹಾರಕ್ಕೆ ರಾಜ್ಯ ಸರ್ಕಾರಕ್ಕೆ ಸೂಕ್ತ ಸೂಚನೆ ಅಥವಾ ಆದೇಶ ಕೊಡಿ ಎಂದು ರಾಜ್ಯಪಾಲರ ಮೂಲಕ ಒತ್ತಾಯಿಸಬಹುದು. ಆದರೆ ಪ್ರವಾಹದ ಸಂದರ್ಭದಲ್ಲಿ ಪ್ರತಿಯೊಂದು ರಾಜ್ಯವೂ ಕೇಂದ್ರ ಸರ್ಕಾರದಿಂದಲೂ ಸೂಕ್ತ ನೆರವನ್ನು ಬಯಸುತ್ತದೆ.
ಪರಿಹಾರ ವಿಚಾರಕ್ಕೆ ಬಂದರೆ ಕಳೆದ ಕೆಲ ತಿಂಗಳಲ್ಲಿ ರಾಜ್ಯದಲ್ಲಿ ಉಂಟಾಗಿದ್ದ ಬರ ಪರಿಸ್ಥಿತಿ ನಿಭಾಯಿಸಲು ಕೇಂದ್ರದಿಂದ ಬರಬೇಕಿದ್ದ ಪರಿಹಾರದ ವಿಚಾರವಾಗಿ ಕರ್ನಾಟಕಕ್ಕೆ ಯಾವ ರೀತಿ ಅನ್ಯಾಯವಾಯ್ತು ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಭೀಕರ ಬರಗಾಲ ಇದ್ದರೂ ಬರ ಪರಿಹಾರಕ್ಕಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಬೇಕಾಯಿತು, ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನೂ ನಡೆಸಬೇಕಾಯಿತು.
ಕಳೆದ ವರ್ಷ ಇದೇ ರೀತಿ ಬಿಜೆಪಿ ಬರ ಅಧ್ಯಯನ ನಡೆಸಿದ್ದ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಮೋದಿ ಕಾಲಿಗೆ ಬಿದ್ದಾದರೂ ಕರ್ನಾಟಕಕ್ಕೆ ಬರಬೇಕಾದ ಬರ ಪರಿಹಾರ ಕೇಳಿ ಎಂದು ಆಗ ಇದ್ದಂದಹ ಬಿಜೆಪಿಯ 25 ಸಂಸದರಿಗೆ ಚಾಟಿ ಬೀಸಿದ್ದರು.
ಆಗ ಕಾಂಗ್ರೆಸ್ ನಲ್ಲಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರೂ ಬರ ಅಧ್ಯಯನ ಮಾಡಿದ ಬಿಜೆಪಿ ವರದಿಯನ್ನ ಯಾರಿಗೆ ಕೊಟ್ಟಿದೆ..? ಎಂದು ಪ್ರಶ್ನಿಸಿದ್ದರು ಜೊತೆಗೆ ಮೋದಿ ಸರ್ಕಾರದಿಂದ ಒಂದು ಪೈಸೆಯೂ ಕರ್ನಾಟಕಕ್ಕೆ ಬಂದಿಲ್ಲ ಎಂದು ಬಿಜೆಪಿ ವಿರುದ್ಧವೇ ಕಿಡಿಕಾರಿದ್ದರು.
‘
ಯಡಿಯೂರಪ್ಪ ಸಿಎಂ ಆಗಿದ್ದ ಸಂದರ್ಭದಲ್ಲಿ 2020ರಲ್ಲಿ ಕರ್ನಾಟಕದ 25 ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿತ್ತು. ಆದರೆ ಆಗಲೂ ಕೇಂದ್ರ ಸರ್ಕಾರ ಬಿಡಿಗಾಸನ್ನೂ ಕೊಟ್ಟಿರಲಿಲ್ಲ. ತುಮಕೂರಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯೆದುರೇ ಆಗ ಸಿಎಂ ಆಗಿದ್ದ ಯಡಿಯೂರಪ್ಪ ಪ್ರವಾಹ ಪರಿಹಾರಕ್ಕಾಗಿ ಆಗ್ರಹಿಸಿದ್ದರು. ಆ ಬಳಿಕ ಯಡಿಯೂರಪ್ಪ ಬಿಜೆಪಿಯಲ್ಲಿ ಸೈಡ್ ಲೈನ್ ಆಗುತ್ತಾ ಹೋದರು.
ಈಗ ಪ್ರವಾಹ ಅಧ್ಯಯನಕ್ಕೆ ಹೊರಟಿರುವ ಬಿಜೆಪಿಯಿಂದ ಕರ್ನಾಟಕಕ್ಕೆ ಆಗಬೇಕಿರುವುದು ಎರಡು ಪ್ರಮುಖ ಕೆಲಸ. ಪ್ರವಾಹ ಪರಿಹಾರದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಚಾಟಿ ಬೀಸುವುದು. ಎರಡನೇಯದ್ದು, ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಪ್ರವಾಹ ಪರಿಹಾರ ಕೊಡಿಸುವುದು.
ಮೊದಲನೇ ಕೆಲಸ, ವಿಪಕ್ಷ ಸ್ಥಾನದಲ್ಲಿರುವ ಬಿಜೆಪಿಗೆ ಸುಲಭ. ಆದರೆ ಪ್ರಧಾನಿ ಮೋದಿ ಎದುರು ನಿಂತು ವರದಿ ತೋರಿಸಿ ಪರಿಹಾರಕ್ಕೆ ಒತ್ತಾಯಿಸಿ , ಪರಿಹಾರ ತರುವುದು ಈಗಿರುವ ರಾಜ್ಯದ ಬಿಜೆಪಿ ನಾಯಕರಿಂದ ಆಗದ ಕೆಲಸ.
ADVERTISEMENT
ADVERTISEMENT