ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಕೈಗೊಂಡಿರುವ ಕೊಡಗು ಚಲೋಗೆ (Kodagu Chalo) ಬೆದರಿರುವ ಬಿಜೆಪಿ ಸರ್ಕಾರ ಕೊಡಗು ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ.
ಸಿದ್ದರಾಮಯ್ಯ ಅವರ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತ ಸಂಪತ್ಕುಮಾರ್ ಮಾಡಿದ್ದ ಮೊಟ್ಟೆ ದಾಳಿ ಖಂಡಿಸಿ ಕಾಂಗ್ರೆಸ್ ಕೊಡಗು ಚಲೋಗೆ ನಿರ್ಧರಿಸಿತ್ತು.
ಆಗಸ್ಟ್ 24ರ ಬೆಳಗ್ಗೆ 6 ಗಂಟೆಯಿಂದ ಆರಂಭಿಸಿ ಆಗಸ್ಟ್ 27ರ ಸಂಜೆ 6 ಗಂಟೆಯವರೆಗೆ ಇಡೀ ಜಿಲ್ಲೆಯಲ್ಲಿ ನಿಷೇಧಾಜ್ಞೆ ಹೇರಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಈ ಮೂಲಕ ಆಗಸ್ಟ್ 26ರಂದು ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಆಯೋಜಿಸಿರುವ ಕೊಡಗು ಚಲೋಗೆ ಬಿಜೆಪಿ ಸರ್ಕಾರ ಅನುಮತಿ ನಿರಾಕರಿಸಿದೆ. ಕೊಡಗು ಚಲೋ ಯಶಸ್ವಿ ಆದರೆ ತನಗೆ ದೊಡ್ಡ ಮಟ್ಟದಲ್ಲಿ ಹಿನ್ನಡೆ ಆಗಬಹುದು ಎಂಬ ಆತಂಕ ಬಿಜೆಪಿಯನ್ನು ಕಾಡುತ್ತಿದೆ.
ಕಾಂಗ್ರೆಸ್ ಆಯೋಜಿಸಿರುವ ಕೊಡಗು ಚಲೋಗೆ ಪ್ರತಿಯಾಗಿ ಕೊಡಗು ಜಿಲ್ಲೆಯಲ್ಲಿ ಬಿಜೆಪಿ ಜನಜಾಗೃತಿ ಸಮಾವೇಶ ಆಯೋಜಿಸಿದ್ದು, ಅದಕ್ಕೂ ಅನುಮತಿ ನಿರಾಕರಿಸಲಾಗಿದೆ.
ಪೂರ್ವನಿಯೋಜಿತ ಮದುವೆ, ನಾಮಕರಣ, ಗೃಹ ಪ್ರವೇಶ ಹಾಗೂ ಸರ್ಕಾರಿ ಕಾರ್ಯಕ್ರಮಗಳನ್ನು ಹೊರತುಪಡಿಸಿ ನಿಷೇಧಾಜ್ಞೆ ಅವಧಿಯಲ್ಲಿ ಬೇರೆ ಕಾರ್ಯಕ್ರಮಗಳನ್ನು ಮಾಡುವಂತಿಲ್ಲ.
ಪ್ರತಿಭಟನೆ, ಸಮಾವೇಶ, ಐದಕ್ಕಿಂತ ಹೆಚ್ಚು ಮಂದಿ ಗುಂಪು ಸೇರಲು ಅವಕಾಶ ಇಲ್ಲ. ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಎಲ್ಲ ರೀತಿಯ ಸಂತೆ-ಜಾತ್ರೆಗಳನ್ನೂ ನಿಷೇಧಿಸಿ ಜಿಲ್ಲಾಧಿಕಾರಿ ಸತೀಶ್ ಆಯೋಜಿಸಿದ್ದಾರೆ.