ರಾಜ್ಯ ರಾಜಕಾರಣ ಈಗ ಎಲೆಕ್ಷನ್ ಮೋಡ್ ಗೆ ಬಂದಿದೆ. ಕಾಂಗ್ರೆಸ್ ಭಾರತ್ ಜೋಡೋ ಪಾದಯಾತ್ರೆ, ಸಿದ್ದರಾಮೋತ್ಸವ ಮೂಲಕ ಎಲೆಕ್ಷನ್ ಗೆ ರಣ ಕಹಳೆ ಮೊಳಗಿಸಲು ಮುಂದಾಗಿದೆ. ಇದಕ್ಕೆ ಬಿಜೆಪಿ ಸಡ್ಡು ಹೊಡೆಯಲು ತೀರ್ಮಾನಿಸಿದೆ. ನಂದಿಗಿರಿಧಾಮದ ಬಳಿಯ ಐಷಾರಾಮಿ ರೆಸಾರ್ಟ್ ನಲ್ಲಿ ನಡೆದ ಮಂಥನ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಅಹಿಂದ ತಂತ್ರಕ್ಕೆ ಪ್ರತಿಯಾಗಿ ಹಿಂದ ಮಂತ್ರ ಜಪಿಸಿದೆ.
ಆಗಸ್ಟ್ ಮೂರ ರಂದು ದಾವಣಗೆರೆಯಲ್ಲಿ ನಡೆಯುವ ಸಿದ್ದರಾಮೋತ್ಸವಕ್ಕೂ ಮೊದಲೇ ಶಕ್ತಿ ಪ್ರದರ್ಶನಕ್ಕೆ ಬಿಜೆಪಿ ಮುಂದಾಗಿದೆ. ಜುಲೈ 28ರಂದು ದೊಡ್ಡಬಳ್ಳಾಪುರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ಸಾಧನಾ ಸಮಾವೇಶ ಹಮ್ಮಿಕೊಳ್ಳಲು ತೀರ್ಮಾನಿಸಿದೆ.
ಈ ಸಾಧನಾ ಸಮಾವೇಶಕ್ಕೆ ಪ್ರಧಾನಿ ಮೋದಿ, ಅಮಿತ್ ಶಾ, ಜೆಪಿ ನಡ್ದಾರನ್ನು ಆಹ್ವಾನಿಸಲು ಚಿಂತನಾ- ಮಂಥನ ಸಭೆಯಲ್ಲಿ ಚಿಂತನೆ ನಡೆಸಲಾಗಿದೆ. ದೊಡ್ಡಬಳ್ಳಾಪುರದ ಬೃಹತ್ ಸಮಾವೇಶವನ್ನು ಯಶಸ್ವಿಗೊಳಿಸುವ ಹೊಣೆಯನ್ನು ಸಚಿವ ಡಾ. ಕೆ ಸುಧಾಕರ್ ವಹಿಸಿಕೊಂಡಿದ್ದಾರೆ.
ಅಂದಹಾಗೆ, ದೊಡ್ಡಬಳ್ಳಾಪುರದ ಸಾಧನಾ ಸಮಾವೇಶ ಆರಂಭ ಮಾತ್ರ. ಕೇವಲ ಆಗಸ್ಟ್ ತಿಂಗಳಲ್ಲಿಯೇ ರಾಜ್ಯದಲ್ಲಿ 20ಕ್ಕೂ ಹೆಚ್ಚು ಕಡೆ ಇಂತಹ ಸಮಾವೇಶ ಹಮ್ಮಿಕೊಂಡು ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಿ ಎಂದು ಹೈಕಮಾಂಡ್ ರಾಜ್ಯ ನಾಯಕರಿಗೆ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.