ADVERTISEMENT
ಶ್ರೀರಾಮನ ಮೇಲೆ ನಂಬಿಕೆ ಮತ್ತು ಭಕ್ತಿ ಇದ್ದವರು ಪ್ರತಿದಿನ ಆತನನ್ನು ಪೂಜಿಸುವುದು ಹೇಗೆ ಧಾರ್ಮಿಕ ಕರ್ತವ್ಯವೋ, ಅದೇ ರೀತಿ ಶ್ರೀರಾಮನನ್ನು ರಾಜಕೀಯಕ್ಕೆ ಬಳಸುವವರ ವಿರುದ್ಧ ದನಿ ಎತ್ತುವುದು ಕೂಡಾ ಅಷ್ಟೇ ಪವಿತ್ರವಾದ ಧಾರ್ಮಿಕ ಕರ್ತವ್ಯವಾಗಿದೆ ಎನ್ನುವ ಮೂಲಕ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರ ಗೈರನ್ನು ಸಿಎಂ ಸಿದ್ದರಾಮಯ್ಯ ಅವರು ಸಮರ್ಥಿಸಿಕೊಂಡಿದ್ದಾರೆ.
ಅಯೋಧ್ಯೆಯಲ್ಲಿ ನಡೆಯಲಿರುವ ರಾಮಲಲ್ಲಾ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸದೆ ಇರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಮ್ಮ ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಮತ್ತು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದ ಅಧೀರ್ ಚೌದರಿ ಅವರ ತೀರ್ಮಾನ ಸರಿಯಾಗಿದೆ, ಇದನ್ನು ನಾನು ಬೆಂಬಲಿಸುತ್ತೇನೆ.
ಜಾತಿ, ಧರ್ಮ, ಪಕ್ಷ-ಪಂಥವನ್ನು ಮೀರಿ ಸರ್ವರನ್ನೂ ಒಳಗೊಂಡು ಭಕ್ತಿ ಮತ್ತು ಗೌರವದಿಂದ ನಡೆಸಬೇಕಾದ ಒಂದು ಧಾರ್ಮಿಕ ಕಾರ್ಯಕ್ರಮವನ್ನು ಒಂದು ಪಕ್ಷದ ಕಾರ್ಯಕ್ರಮವನ್ನಾಗಿ ಮಾಡಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಸಂಘ ಪರಿವಾರದ ನಾಯಕರು ಶ್ರೀರಾಮನಿಗೆ ಹಾಗೂ ದೇಶದ 140 ಕೋಟಿ ಜನತೆಗೆ ಅಗೌರವವನ್ನುಂಟು ಮಾಡಿದ್ದಾರೆ. ಶ್ರದ್ದಾಪೂರ್ವಕವಾಗಿ ನಡೆಸಬೇಕಾಗಿದ್ದ ಧಾರ್ಮಿಕ ಕಾರ್ಯಕ್ರಮವನ್ನು ರಾಜಕೀಯ ಪ್ರಚಾರದ ಅಭಿಯಾನವನ್ನಾಗಿ ಮಾಡಿದ್ದು ಸಮಸ್ತ ಹಿಂದೂ ಬಾಂಧವರಿಗೆ ಮಾಡಿರುವ ದ್ರೋಹವಾಗಿದೆ.
ಹಿಂದೂ ಧರ್ಮದ ಸಂಸ್ಕೃತಿ, ಆಚಾರ-ವಿಚಾರಗಳ ಬಗ್ಗೆ ಪ್ರತಿನಿತ್ಯ ಉಪದೇಶ ನೀಡುವ ಬಿಜೆಪಿ ಮತ್ತು ಆರ್.ಎಸ್.ಎಸ್ ನಾಯಕರು ಅಪೂರ್ಣಗೊಂಡಿರುವ ಶ್ರೀರಾಮನ ದೇವಸ್ಥಾನವನ್ನು ಉದ್ಘಾಟಿಸಲು ಹೊರಟಿರುವ ಪ್ರಧಾನಿ ನರೇಂದ್ರಮೋದಿ ಅವರ ನಡೆಯ ಬಗ್ಗೆ ಮೌನವಾಗಿರುವುದು ಇವರೆಲ್ಲರ ಪೊಳ್ಳು ಹಿಂದುತ್ವದ ಮುಖವಾಡವನ್ನು ಬಯಲುಗೊಳಿಸಿದೆ.
ರಾಮಜನ್ಮಭೂಮಿ ವಿವಾದ ಶುರುವಾದ ದಿನದಿಂದ ಕಾಂಗ್ರೆಸ್ ಪಕ್ಷ ತನ್ನ ನಿಲುವಿಗೆ ಬದ್ಧವಾಗಿ ಉಳಿದಿದೆ. ನ್ಯಾಯಾಲಯದ ತೀರ್ಪಿಗೆ ನಾವು ತಲೆಬಾಗುತ್ತೇವೆ ಎಂಬ ನಮ್ಮ ನಿಲುವಿನಂತೆ ರಾಮಮಂದಿರ ನಿರ್ಮಾಣಕ್ಕೆ ನಮ್ಮ ಸಂಪೂರ್ಣ ಬೆಂಬಲ ನೀಡಿದ್ದೆವು. ಇದರ ಬಗ್ಗೆ ನಮ್ಮಲ್ಲಿ ಯಾವುದೇ ತಕರಾರಿಲ್ಲ. ಮುಸ್ಲಿಂ ಬಾಂಧವರು ಕೂಡಾ ನ್ಯಾಯಾಲಯದ ತೀರ್ಪನ್ನು ಒಪ್ಪಿಕೊಂಡು ನ್ಯಾಯಾಂಗದ ಮೇಲಿನ ತಮ್ಮ ನಿಷ್ಠೆಯನ್ನು ಸಾಬೀತುಪಡಿಸಿದ್ದಾರೆ.
ಆದರೆ ರಾಮಜನ್ಮಭೂಮಿ ವಿವಾದ ಧಾರ್ಮಿಕ ಶ್ರದ್ದೆಯ ಪ್ರಶ್ನೆ, ಅದು ನ್ಯಾಯಾಲಯದಲ್ಲಿ ತೀರ್ಮಾನ ಮಾಡುವಂತಹದ್ದಲ್ಲ ಎಂದು ಹೇಳಿಕೊಂಡು ಬಂದಿದ್ದ ಬಿಜೆಪಿ ಮತ್ತು ಆರ್.ಎಸ್.ಎಸ್, ವಿಶ್ವಹಿಂದೂ ಪರಿಷತ್ ಮೊದಲಾದ ಸಂಘಟನೆಗಳು ಸುಪ್ರೀಂ ಕೋರ್ಟ್ ತೀರ್ಪು ತಮ್ಮ ಪರವಾಗಿ ಹೊರಬಿದ್ದ ಕೂಡಲೇ ಅದನ್ನು ಒಪ್ಪಿಕೊಂಡಿರುವುದು ಈ ಸಂಘಟನೆಗಳ ನಾಯಕರ ಹಿಪಾಕ್ರಟಿಕ್ ನಡವಳಿಕೆಗೆ ಸಾಕ್ಷಿ.
ರಾಮಮಂದಿರದಲ್ಲಿ ಶೈವರು-ಶಾಕ್ತರಿಗೆ ಅಧಿಕಾರ ಇಲ್ಲ ಎಂಬ ರಾಮಮಂದಿರ ಟ್ರಸ್ಟ್ನ ಕಾರ್ಯದರ್ಶಿಯವರ ಹೇಳಿಕೆ ವಿವಾದ ಸೃಷ್ಟಿಸಿದೆ. ಇದು ನಿಜವೆಂದಾದರೆ ಇದು ಸಮಸ್ತ ಶೈವ ಆರಾಧಕರಿಗೆ ಮಾಡಿರುವ ಅವಮಾನವಾಗಿದೆ. ಇದೇ ರೀತಿ ರಾಮಮಂದಿರವನ್ನು ರಾಜಕೀಯಕ್ಕಾಗಿ ದುರುಪಯೋಗಗೊಳಿಸುತ್ತಿರುವುದನ್ನು ವಿರೋಧಿಸಿ ನಾಲ್ವರು ಶಂಕರಾಚಾರ್ಯರು ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಬಹಿಷ್ಕರಿಸುವುದಾಗಿ ಹೇಳಿರುವುದು ವರದಿಯಾಗಿದೆ. ಸಮಸ್ತ ಹಿಂದೂಗಳನ್ನು ಒಗ್ಗೂಡಿಸುವ ಕಾರ್ಯಕ್ರಮವಾಗಬೇಕಾಗಿದ್ದ ರಾಮಲಲ್ಲಾ ಪ್ರತಿಷ್ಠಾಪನಾ ಕಾರ್ಯಕ್ರಮ ಬಿಜೆಪಿಯ ರಾಜಕೀಯದಿಂದಾಗಿ ಹಿಂದೂಗಳನ್ನು ಒಡೆಯುವ ಕಾರ್ಯಕ್ರಮವಾಗಿರುವುದು ದುರಂತ.
ಇನ್ನೇನು ಹತ್ತು ವರ್ಷಗಳ ಆಡಳಿತವನ್ನು ಪೂರ್ಣಗೊಳಿಸಲಿರುವ ಪ್ರಧಾನಿ ನರೇಂದ್ರಮೋದಿ ಅವರಿಗೆ ತಮ್ಮ ಸಾಧನೆಯನ್ನು ಮತದಾರರ ಮುಂದಿಟ್ಟು ಚುನಾವಣೆಯನ್ನು ಗೆಲ್ಲುವ ಆತ್ಮವಿಶ್ವಾಸ ಇಲ್ಲ. ಇದಕ್ಕಾಗಿ ಲೋಕಸಭಾ ಚುನಾವಣೆಯ ಕಾಲದಲ್ಲಿಯೇ ಅವಸರದಿಂದ ಅಪೂರ್ಣ ಸ್ಥಿತಿಯಲ್ಲಿರುವ ರಾಮಮಂದಿರವನ್ನು ಉದ್ಘಾಟಿಸಿ ಈ ಮೂಲಕ ಹಿಂದುತ್ವದ ಅಲೆಯನ್ನು ಬಡಿದೆಬ್ಬಿಸಿ ಅದರ ಮರೆಯಲ್ಲಿ ತಮ್ಮ ವೈಫಲ್ಯವನ್ನು ಮುಚ್ಚಿಹಾಕುವ ಪ್ರಯತ್ನ ನಡೆಸಿದ್ದಾರೆ.
ಕಳೆದ 30-35 ವರ್ಷಗಳಿಂದ ಬಿಜೆಪಿ ಮತ್ತು ಸಂಘ ಪರಿವಾರ ರಾಮನ ಹೆಸರಲ್ಲಿ ನಡೆಸಿಕೊಂಡು ಬಂದಿರುವ ರಾಜಕೀಯವನ್ನು ಗಂಭೀರವಾಗಿ ಗಮನಿಸುತ್ತಾ ಬಂದಿರುವ ದೇಶದ ಜನತೆ ಈ ಬಾರಿ ಇಂತಹ ಡೋಂಗಿ ಹಿಂದುತ್ವದ ಜಾಲಕ್ಕೆ ಖಂಡಿತ ಬಲಿಯಾಗುವುದಿಲ್ಲ ಎಂಬ ವಿಶ್ವಾಸ ನನಗಿದೆ. ಈಗಾಗಲೇ ಜನ ಇಟ್ಟಿಗೆಯ ಹೆಸರಲ್ಲಿ ಸಂಗ್ರಹಿಸಿರುವ ದೇಣಿಗೆಯ ಲೆಕ್ಕವನ್ನು ಕೇಳತೊಡಗಿದ್ದಾರೆ.
ನಾವು ಹಿಂದೂ ಧರ್ಮದ ವಿರೋಧಿಗಳಲ್ಲ, ಧರ್ಮದ ಹೆಸರಲ್ಲಿ ನಡೆಸಲಾಗುವ ಅಸ್ಪ್ರಶ್ಯತೆ, ಜಾತೀಯತೆ, ಅಂಧಶ್ರದ್ದೆ, ಕಂದಾಚಾರಗಳನ್ನು ವಿರೋಧಿಸುತ್ತೇವೆ. ಧರ್ಮವನ್ನು ರಾಜಕಾರಣಕ್ಕೆ ಬಳಸುವುದರ ಬಗ್ಗೆ ನಮ್ಮ ಸಂಪೂರ್ಣ ವಿರೋಧ ಇದೆ. ಮಹಾತ್ಮ ಗಾಂಧೀಜಿ, ಸ್ವಾಮಿ ವಿವೇಕಾನಂದ, ಕನಕದಾಸ, ನಾರಾಯಣ ಗುರು, ಕುವೆಂಪು ಅವರು ಸೇರಿದಂತೆ ದೇಶದ ಅನೇಕಾನೇಕ ಮಹನೀಯರು ಆಚರಿಸುತ್ತಾ ಬಂದಿರುವ ಹಿಂದೂ ಧರ್ಮದ ಬಗ್ಗೆ ನಮಗೆ ಯಾವುದೇ ತಕರಾರಿಲ್ಲ. ಆದರೆ ಧರ್ಮವನ್ನು ರಾಜಕೀಯ ದುರುದ್ದೇಶಕ್ಕೆ ಬಳಸಿಕೊಳ್ಳುತ್ತಿರುವ ಬಿಜೆಪಿ ಮತ್ತು ಸಂಘ ಪರಿವಾರದ ಡೋಂಗಿ ಹಿಂದುತ್ವವನ್ನು ನಾವು ವಿರೋಧಿಸುತ್ತಲೇ ಇರುತ್ತೇವೆ. ಈ ವಿಷಯದಲ್ಲಿ ನಾವು ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರವನ್ನು ಮಾಡುವುದಿಲ್ಲ.
ಜನಪ್ರತಿನಿಧಿಯಾಗಿ ಇಲ್ಲಿಯ ವರೆಗೆ ನೂರಾರು ದೇವಸ್ಥಾನಗಳ ಪ್ರತಿಷ್ಠಾಪನೆ, ಜೀರ್ಣೋದ್ದಾರದಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ನನ್ನ ಊರಿನಲ್ಲಿಯೇ ರಾಮನ ದೇವಸ್ಥಾನವನ್ನು ನಿರ್ಮಾಣ ಮಾಡಿ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದ್ದೇನೆ. ಇದೇ ರೀತಿ ಮಸೀದಿ-ಚರ್ಚ್ ಗಳ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಗೌರವ ಸಲ್ಲಿಸಿದ್ದೇನೆ. ಸರ್ವಧರ್ಮ ಸಮಭಾವ ಸಂವಿಧಾನದ ಆಶಯವಾಗಿದೆ. ಅದಕ್ಕೆ ನಾವೆಲ್ಲರೂ ಬದ್ಧರಾಗಲೇ ಬೇಕಾಗಿದೆ.
ಶ್ರೀರಾಮನ ಮೇಲೆ ನಂಬಿಕೆ ಮತ್ತು ಭಕ್ತಿ ಇದ್ದವರು ಪ್ರತಿದಿನ ಆತನನ್ನು ಪೂಜಿಸುವುದು ಹೇಗೆ ಧಾರ್ಮಿಕ ಕರ್ತವ್ಯವೋ, ಅದೇ ರೀತಿ ಶ್ರೀರಾಮನನ್ನು ರಾಜಕೀಯಕ್ಕೆ ಬಳಸುವವರ ವಿರುದ್ಧ ದನಿ ಎತ್ತುವುದು ಕೂಡಾ ಅಷ್ಟೇ ಪವಿತ್ರವಾದ ಧಾರ್ಮಿಕ ಕರ್ತವ್ಯವಾಗಿದೆ. ಯಾವ ಧರ್ಮ ಕೂಡಾ ಇನ್ನೊಂದು ಧರ್ಮವನ್ನು ದ್ವೇಷಿಸುವುದಿಲ್ಲ, ನಿರಾಕರಿಸುವುದಿಲ್ಲ. ಸಮಾಜವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಮಾಡುವ ಸಂವಿಧಾನದ ಆಶಯಕ್ಕೆ ನಾನು ಮತ್ತು ನಮ್ಮ ಪಕ್ಷ ಬದ್ಧವಾಗಿದೆ.
ADVERTISEMENT