ಕೊಪ್ಪಳ ಗವಿ ಮಠದಲ್ಲಿ 5 ಸಾವಿರ ವಿದ್ಯಾರ್ಥಿಗಳ ಉಚಿತ ವಸತಿ ಹಾಗೂ ಪ್ರಸಾದ ನಿಲಯ ಸ್ಥಾಪನೆಗೆ ರಾಜ್ಯ ಸರ್ಕಾರ 10 ಕೋಟಿ ರೂ. ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.
ಮರಿ ಶಾಂತ ವೀರ ಮಾಹಾಸ್ವಾಮಿಗಳ ಪುಣ್ಯ ಸ್ಮರಣೆ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗವಿ ಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳು ಮಾತನಾಡುತ್ತಾ, ಹಿರಿಯ ಶ್ರೀ ನೆನೆದು ಕಣ್ಣೀರು ಹಾಕಿದ್ದರು. ಅಲ್ಲದೇ, ಬಡ ವಿದ್ಯಾರ್ಥಿಗಳ ಸೇವೆ ಮಾಡಲು ದೇವರು ನನ್ನ ಜೋಳಿಗೆಗೆ ಇನ್ನಷ್ಟು ಶಕ್ತಿ ನೀಡಲಿ ಎಂದು ಕೇಳಿಕೊಂಡಿದ್ದರು.
ಆ ಬೆನ್ನಲ್ಲೇ, ಸಾಮಾಜಿಕ ಜಾಲತಾಣಗಳ ಮೂಲಕ ಮಠದ ಹಳೆಯ ವಿದ್ಯಾರ್ಥಿಗಳು ಹಾಗೂ ಭಕ್ತರು ಶ್ರೀಗಳ ಆಶಯ ನೆರವೇರಿಸಲು ದೇಣಿಗೆ ನೀಡುವಂತೆ ಅಭಿಯಾನ ನಡೆಸಿದ್ದರು. ಈ ಅಭಿಯಾನ ಸಅಕಷ್ಟು ಯಶಸ್ವಿಯೂ ಆಗಿತ್ತು.
ಕೊಪ್ಪಳ ಸಂಸದ ಸಂಗಣ್ಣ ಕರಡಿ ಇವರ ನೇತೃತ್ವದಲ್ಲಿ ಜಿಲ್ಲೆಯ ಶಾಸಕರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಮಠದ ಸೇವಾ ಕಾರ್ಯಕ್ಕೆ 25 ಕೋಟಿ ರೂ ಬಿಡುಗಡೆ ಮಾಡುವಂತೆ ಕೇಳಿಕೊಂಡಿದ್ದರು. ಪ್ರಜಾ ಪ್ರತಿನಿಧಿಗಳ ಈ ಪತ್ರಕ್ಕೆ ರಾಜ್ಯ ಸರ್ಕಾರ ಸ್ಪಂದಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಗವಿಶ್ರೀ ಮಠದ 5 ಸಾವಿರ ವಿದ್ಯಾರ್ಥಿಗಳ ಉಚಿತ ವಸತಿ ನಿಲಯ ಹಾಗೂ ಪ್ರಸಾದ ನಿಲಯ ಕಟ್ಟಡ ಸ್ಥಾಪನೆಗೆ 10 ಕೋಟಿ ರೂ. ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆಗೆ ಸೂಚಿಸಿದ್ದಾರೆ.