ಹೊಸ ವರ್ಷದ ಸಂಭ್ರಮಾಚರಣೆಯಿಂದಾಗಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಆದಾಯ ಬಂದಿದೆ. 2023 ಇಸವಿಯ ಕಡೆಯ ದಿನವಾದ ಡಿಸೆಂಬರ್ 31ರಂದು ರಾಜ್ಯಾದ್ಯಂತ ಮದ್ಯ ಮಾರಾಟದಿಂದ ಸರ್ಕಾರದ ಬೊಕ್ಕಸಕ್ಕೆ 193 ಕೋಟಿ ರೂಪಾಯಿ ಹರಿದು ಬಂದಿದೆ.
ಸಾಧಾರಣ ದಿನವೊಂದಕ್ಕೆ ಸುಮಾರು 90 ಕೋಟಿ ಆದಾಯ ಗಳಿಸುತ್ತಿದ್ದ ರಾಜ್ಯದ ಅಬಕಾರಿ ಇಲಾಖೆ, ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಒಂದೇ ದಿನದಲ್ಲಿ ದ್ವಿಗುಣ ಆದಾಯ ಗಳಿಸಿದೆ. ಈ ಪೈಕಿ 14.07 ಲಕ್ಷ ಬಾಕ್ಸ್ ನಷ್ಟು ಬಿಯರ್ ಮಾರಾಟದಿಂದ ಸುಮಾರು 170 ಕೋಟಿ ರೂಪಾಯಿ ಆದಾಯ ಬಂದಿದೆ.
ಕಳೆದ ಡಿಸೆಂಬರ್ ತಿಂಗಳಲ್ಲಿ ಮದ್ಯ ಮಾರಾಟದಿಂದ ಸರ್ಕಾರಕ್ಕೆ ಬರೋಬ್ಬರಿ 3 ಸಾವಿರ ಕೋಟಿ ರೂಪಾಯಿ ಆದಾಯವಾಗಿದೆ. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ 2,611 ಕೋಟಿ ಆದಾಯ ಬಂದಿತ್ತು. ಮದ್ಯ ಮಾರಾಟದಿಂದ 9 ತಿಂಗಳಿಗೆ ಬರೋಬ್ಬರಿ 25 ಸಾವಿರದ 100 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ. ಅಂದ್ರೆ 2023ರ ಡಿಸೆಂಬರ್ ತಿಂಗಳಲ್ಲಿ ಬರೋಬ್ಬರಿ ಮೂರು ಸಾವಿರ ಕೋಟಿ ರೂಪಾಯಿ ಆದಾಯ ಬಂದಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಬಿಯರ್ ಮಾರಾಟದಲ್ಲಿ 15 ಪರ್ಸೆಂಟ್ ಏರಿಕೆ ಕಂಡಿದೆ.