ADVERTISEMENT
ಕರ್ನಾಟಕದಲ್ಲಿ ಐದು ಮತ್ತು ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದಲ್ಲಿ (State Level Exam) ಪರೀಕ್ಷೆ ನಡೆಸುವ ಬಗ್ಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಲೋಚಿಸುತ್ತಿದೆ ಎಂದು ಪ್ರಮುಖ ಇಂಗ್ಲೀಷ್ ದೈನಿಕ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಶಿಕ್ಷಣ ಹಕ್ಕು ಕಾಯ್ದೆಯಡಿ (RTE Right To Education) ಎಂಟನೇ ತರಗತಿವರೆಗೆ ಯಾವ ವಿದ್ಯಾರ್ಥಿನಿಯನ್ನೂ ಅನುತ್ತೀರ್ಣಗೊಳಿಸಬಾರದು (No Detention Policy) ಎಂಬ ನಿಯಮದಿಂದಾಗಿ ವಿದ್ಯಾರ್ಥಿಗಳ ಕಲಿಕೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದೆ ಎಂದು ಇಲಾಖೆ ನಡೆಸಿರುವ ಅಧ್ಯಯನದಲ್ಲಿ ಗೊತ್ತಾಗಿದೆ.
ಈ ಹಿನ್ನೆಲೆಯಲ್ಲಿ ಐದು ಮತ್ತು ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದಲ್ಲಿ ಏಕರೂಪದ ಪರೀಕ್ಷೆಯನ್ನು ನಡೆಸುವುದು ಮತ್ತು ಶಾಲಾ ಅಥವಾ ಜಿಲ್ಲಾ ಮಟ್ಟದಲ್ಲಿ ಮೌಲ್ಯಮಾಪನ ಮಾಡುವ ಬಗ್ಗೆ ಆಲೋಚಿಸಲಾಗುತ್ತಿದೆ.
ಈ ಸಂಬಂಧ ಸಮಾಲೋಚಿಸಲು ಅಕ್ಟೋಬರ್ 12ರಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ (Education Minister B C Nagesh) ಅವರು ಸಭೆಯನ್ನೂ ಕರೆದಿದ್ದಾರೆ.
ಸುರೇಶ್ ಕುಮಾರ್ ಅವರು ಶಿಕ್ಷಣ ಸಚಿವರಾಗಿದ್ದಾಗ ಏಳನೇ ತರಗತಿಗೆ ಮತ್ತೆ ರಾಜ್ಯಮಟ್ಟದಲ್ಲಿ ಪರೀಕ್ಷೆ ನಡೆಸುವ ಪದ್ಧತಿಯನ್ನು ಜಾರಿಗೊಳಿಸುವ ಪ್ರಯತ್ನಗಳು ನಡೆದಿದ್ದವು. 2004-05ರ ಶೈಕ್ಷಣಿಕ ಸಾಲಿನಲ್ಲಿ ಕೊನೆಯದಾಗಿ ಏಳನೇ ತರಗತಿಗೆ ರಾಜ್ಯ ಮಟ್ಟದಲ್ಲಿ ಪರೀಕ್ಷೆ ನಡೆಸಲಾಗಿತ್ತು.
ADVERTISEMENT