ಆಜಾನ್ (Azaan) ವೇಳೆ ಧ್ವನಿವರ್ಧಕ (Loud Speaker) ಬಳಸದಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಕರ್ನಾಟಕ ಹೈಕೋರ್ಟ್ (Karnataka High Court) ತಿರಸ್ಕರಿಸಿದೆ.
ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ದಿನದಲ್ಲಿ ಐದು ಬಾರಿ ಧ್ವನಿವರ್ಧಕದ ಮೂಲಕ ಆಜಾನ್ ಕೂಗುವುದಿಂದ ಅನ್ಯಧರ್ಮಿಯರ ಭಾವನೆಗಳಿಗೆ ಧಕ್ಕೆ ಆಗುತ್ತದೆ ಎಂದು ಹೇಳಿ ಪಿಐಎಲ್ ಸಲ್ಲಿಕೆ ಆಗಿತ್ತು.
ಬೆಂಗಳೂರಿನ ಭುವನೇಶ್ವರಿ ನಗರದ ಚಂದ್ರಶೇಖರ್ ಎನ್ನುವವರು ಅರ್ಜಿ ಸಲ್ಲಿಸಿದ್ದರು.
ಧ್ವನಿವರ್ಧಕದ ಮೂಲಕ ಆಜಾನ್ ಕೂಗುವುದರಿಂದ ಅನ್ಯ ಧರ್ಮಿಯರ ಭಾವನೆಗಳಿಗೆ ಧಕ್ಕೆ ಆಗುತ್ತದೆ ಎಂಬ ಅರ್ಜಿದಾರರ ವಾದವನ್ನು ಹೈಕೋರ್ಟ್ನ ಹಂಗಾಮಿ ನ್ಯಾಯಮೂರ್ತಿ ಅಲೋಕ್ ಆರಾಧೆ ಅವರ ಪೀಠ ಒಪ್ಪಿಲ್ಲ.
ಅರ್ಜಿದಾರರು ಮತ್ತು ಅನ್ಯ ಧರ್ಮದಲ್ಲಿ ನಂಬಿಕೆಯುಳ್ಳವರು ತಮ್ಮ ಧರ್ಮವನ್ನು ಆಚರಿಸಲು ಹಕ್ಕಿದೆ. ಆಜಾನ್ ಎನ್ನುವುದು ಪ್ರಾರ್ಥನೆ ಮಾಡುವಂತೆ ಮುಸ್ಲಿಮರಿಗೆ ನೀಡಲಾಗುವ ಕರೆ. ಆಜಾನ್ ಇಸ್ಲಾಂನ ಮೂಲಭೂತ ಆಚರಣೆ ಎಂದು ಅರ್ಜಿದಾರರೇ ಹೇಳಿದ್ದಾರೆ. ಆದರೆ ಆಜಾನ್ನಿಂದ ಅರ್ಜಿದಾರರು ಮತ್ತು ಇತರೆ ಧರ್ಮಿಯರ ಭಾವನೆಗಳಿಗೆ ಧಕ್ಕೆ ಆಗುತ್ತದೆ ಎಂಬ ವಾದವನ್ನು ಒಪ್ಪಲು ಸಾಧ್ಯವಿಲ್ಲ
ಎಂದು ಹೈಕೋರ್ಟ್ ಹೇಳಿದೆ.
ಇದೇ ವೇಳೆ ಧ್ವನಿವರ್ಧಕ ಬಳಕೆ ಬಗ್ಗೆ ವಿಧಿಸಲಾಗಿರುವ ನಿಯಮಗಳ ಉಲ್ಲಂಘನೆ ಬಗ್ಗೆ 8 ವಾರಗಳಲ್ಲಿ ವರದಿ ಸಲ್ಲಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಿದೆ.
ADVERTISEMENT
ADVERTISEMENT