ಸಾಮಾಜಿಕ ಜಾಲತಾಣ ಟ್ವಿಟ್ಟರ್ನಲ್ಲಿ ಸುಳ್ಳು ಸುದ್ದಿಯನ್ನು ಹಂಚಿಕೊಂಡ ಸಂಬಂಧ ಬಿಜೆಪಿ ಸಂಸದ ತೇಜಸ್ವಿಸೂರ್ಯ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.
ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಬೆಂಗಳೂರು ದಕ್ಷಿಣ ಸಂಸದ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠ ಪುರಸ್ಕರಿಸಿದೆ.
ನಾನು ಕೆಲವು ಸುದ್ದಿಯನ್ನು ಹಂಚಿಕೊಂಡಿದ್ದೇನೆ ಎನ್ನುವುದು ನನ್ನ ವಿರುದ್ಧ ಇರುವ ಆರೋಪ. ನಾನು ಆ ಟ್ವೀಟ್ನ್ನೇ ಡಿಲೀಟ್ ಮಾಡಿದ್ದೇನೆ. ಹೀಗಾಗಿ ನನ್ನ ವಿರುದ್ಧದ ಕ್ರಿಮಿನಲ್ ಪ್ರಕರಣವೇ ನಿಲ್ಲಲ್ಲ. ಜೊತೆಗೆ ಮರು ದಿನವೇ ಮೃತರೈತನ ತಂದೆ ಮಾಧ್ಯಮಗಳಿಗೆ ಕೊಟ್ಟ ಹೇಳಿಕೆಯಲ್ಲಿ ವಕ್ಫ್ ಕಾರಣದಿಂದ ತಮ್ಮ ಮಗ ಸಾವನ್ನಪ್ಪಿದ್ದಾನೆ ಎಂದು ಹೇಳಿಕೆ ನೀಡಿದ್ದಾರೆ ಎಂದು ಸಂಸದ ತೇಜಸ್ವಿಸೂರ್ಯ ಪರ ವಕೀಲರು ವಾದಿಸಿದ್ದರು.
ನವೆಂಬರ್ 7ರಂದು ಕನ್ನಡ ನ್ಯೂಸ್ ವೆಬ್ಸೈಟ್ವೊಂದು ಪ್ರಕಟಿಸಿದ್ದ ಸುಳ್ಳು ಸುದ್ದಿಯನ್ನು ತೇಜಸ್ವಿಸೂರ್ಯ ಹಂಚಿಕೊಂಡಿದ್ದರು. ಆ ವೆಬ್ಸೈಟ್ ಪ್ರಕಟಿಸಿದ್ದ ಸುದ್ದಿಯ ಪ್ರಕಾರ ಹಾವೇರಿ ಜಿಲ್ಲೆಯ ರುದ್ರಪ್ಪ ಚನ್ನಪ್ಪ ಬಾಳೀಕಾಯಿ ತನ್ನ ಜಮೀನನ್ನು ವಕ್ಫ್ ಬೋರ್ಡ್ ವಶಪಡಿಸಿಕೊಂಡಿದ್ದರಿಂದ ಆತ್ಮಹತ್ಯೆ ಮಾಡ್ಕೊಂಡಿದ್ದ ಎಂದು ಆರೋಪಿಸಲಾಗಿತ್ತು. ಆದರೆ ಹಾವೇರಿ ಪೊಲೀಸರು ಕೊಟ್ಟ ಪ್ರಕಟಣೆಯ ಪ್ರಕಾರ 2022ರಲ್ಲಿ ರುದ್ರಪ್ಪ ಆತ್ಮಹತ್ಯೆ ಮಾಡಿಕೊಂಡ ಬಳಿಕ ಆತನ ತಂದೆ ಪೊಲೀಸರಿಗೆ ಕೊಟ್ಟ ದೂರಿನಲ್ಲಿ ಸಾಲದ ಕಾರಣದಿಂದ ತಮ್ಮ ಮಗ ಆತ್ಮಹತ್ಯೆ ಮಾಡ್ಕೊಂಡಿದ್ದ ಎಂದಿದ್ದರು. ಅಷ್ಟೇ ಅಲ್ಲ, ರಾಜ್ಯ ಸರ್ಕಾರದಿಂದ ಪರಿಹಾರವನ್ನೂ ಪಡೆದಿದ್ದರು.
ಸುಳ್ಳು ಸುದ್ದಿಯನ್ನು ಹಂಚಿಕೊಂಡು ಕೋಮು ಪ್ರಚೋದನೆ ನೀಡಿದ ಆರೋಪದಡಿ ಹಾವೇರಿ ಪೊಲೀಸರು ತೇಜಸ್ವಿಸೂರ್ಯ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು.
ವಿಚಾರಣೆಯ ಸಂದರ್ಭದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ʻಇದು ವಿಷಾದನೀಯ ಸಂಗತಿ. ಒಂದು ಜೀವ ಹೋಗಿದೆ. ರೈತನ ಮಗ ಸಾಲದ ಕಾರಣಕ್ಕೋ ಅಥವಾ ಮತ್ತಾವುದಕ್ಕೋ ಆತ್ಮಹತ್ಯೆ ಮಾಡ್ಕೊಂಡಿದ್ದಾನೆ. ನೀವೆಲ್ಲ ರಾಜಕೀಯವಾಟವಾಡುತ್ತಿದ್ದೀರಿʼ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ADVERTISEMENT
ADVERTISEMENT